• 8 ಸೆಪ್ಟೆಂಬರ್ 2024

ಉಪ್ಪಿನಂಗಡಿ ಮಂಜ ಬೈದ್ಯನ ಕಥೆ!ವೀರ ಸೇನಾನಿ

 ಉಪ್ಪಿನಂಗಡಿ ಮಂಜ ಬೈದ್ಯನ ಕಥೆ!ವೀರ ಸೇನಾನಿ
Digiqole Ad

 

ಉಪ್ಪಿನಂಗಡಿ ಮಂಜ ಬೈದ್ಯವೀರ ಸೇನಾನಿಯ ಕಥೆ

ಬಂಗಾಲದಲ್ಲಿ ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಆರಂಭವಾಗುವ 20 ವರ್ಷಗಳ ಮುಂಚೆಯೇ, 1837ರ ಮೇ 27ದಲ್ಲೇ ಕರ್ನಾಟಕದ ಕರಾವಳಿಯ ಉಪ್ಪಿನಂಗಡಿಯ ಮಂಜ ಬೈದ್ಯ ಎಂಬ ವೀರ ಸೇನಾನಿ ಬ್ರಿಟೀಷರ ವಿರುದ್ಧ ದಂಗೆ ಎದ್ದು ಹುತಾತ್ಮನಾದ ವಿಷಯ ಬಹುತೇಕರಿಗೆ ತಿಳಿಯದೇ ಇರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.

 

ನಾವೆಲ್ಲಾ ನಮ್ಮ ಇತಿಹಾಸದಲ್ಲಿ ಓದಿರುವಂತೆ 1850ರ ಸಮಯದಲ್ಲಿ, ಬ್ರಿಟಿಷರು ಎನ್‌ಫೀಲ್ಡ್ ರೈಫಲ್ ಅನ್ನು ಭಾರತ ಸೈನಿಕರಿಗೆ ಪರಿಚಯಿಸಿದರು. ಅ ರೀತಿಯ ಕೋವಿಗೆ ಬಳಸುವ ಮದ್ದಿನ ತುದಿಯನ್ನು ಬಾಯಿಯಿಂದ ಕಚ್ಚಿ ತೆಗೆದು ನಂತರ ತುಪಾಕಿಗಳಲ್ಲಿ ಬಳಸುವಂತಹ ವ್ಯವಸ್ಥೆ ಅದರಲ್ಲಿದ್ದು, ಆ ಮದ್ದಿನ ತುದಿಗಳಿಗೆ ಹಂದಿ ಅಥವಾ ಹಸುವಿನ ಕೊಬ್ಬನ್ನು ಹಚ್ಚಿರುತ್ತಿದ್ದರು. ಅಂದಿನ ಬ್ರಿಟೀಷರ ಸೈನ್ಯದಲ್ಲಿದ್ದ ಹಿಂದೂಗಳು ಗೋವುಗಳನ್ನು ಹೆಚ್ಚಾಗಿ ಗೌರವಿಸುತ್ತಿದ್ದರೆ, ಮುಸ್ಲಿಮ್ ಸೈನಿಕರಿಗೆ ಹಂದಿ ನಿಷಿದ್ಧವಾಗಿತ್ತು. ಹೀಗೆ ಹಂದಿ ಅಥವಾ ಗೋವಿನ ಕೊಬ್ಬನ್ನು ಬಳಳಿದ ಮದ್ದನ್ನು ಬಳಸಲು ಹಿಂಜರಿದ ಸೈನಿಕರು 34 ನೇ ಬಂಗಾಳ ಸ್ಥಳೀಯ ಪದಾತಿ ದಳದ (BNI) ಸಿಪಾಯಿ ಈಸ್ಟ್ ಇಂಡಿಯಾ ಕಂಪನಿಯ ತನ್ನ ಕಮಾಂಡಿಂಗ್ ಅಧಿಕಾರಿಗಳ ವಿರುದ್ಧ 29 ಮಾರ್ಚ್ 1857 ರಂದು,

ಮಂಗಲ್ ಪಾಂಡೆ ಎಂಬ ಸೈನಿಕನ ನೇತೃತ್ವದಲ್ಲಿ ದಂಗೆ ಎದ್ದರು. ಆರಂಭದಲ್ಲಿ ಇದನ್ನು ಬ್ರಿಟೀಷರು ಸೈನಿಕರ ದಂಗೆ ಎಂದು ಕರೆದರೂ, ವೀರ ಸಾವರ್ಕರ್ ಅವರು ಅದು ಕೇವಲ ಸಿಪಾಯಿ ದಂಗೆಯಾಗಿರದೇ ಭಾರತದ ಪ್ರಥಮ ಸ್ವಾತ್ರಂತ್ಯ್ರ ಸಂಗ್ರಾಮ ಎಂದು ಕರೆದರು.

ಆದರೆ ಹೀಗೆ ಬಂಗಾಲದಲ್ಲಿ ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಆರಂಭವಾಗುವ 20 ವರ್ಷಗಳ ಮುಂಚೆಯೇ, 1837ರ ಮೇ 27ದಲ್ಲೇ ಕರ್ನಾಟಕದ ಕರಾವಳಿಯ ಉಪ್ಪಿನಂಗಡಿಯ ಮಂಜ ಬೈದ್ಯ ಎಂಬ ವೀರ ಸೇನಾನಿ ಬ್ರಿಟೀಷರ ವಿರುದ್ಧ ದಂಗೆ ಎದ್ದು ಹುತಾತ್ಮನಾದ ವಿಷಯ ಬಹುತೇಕರಿಗೆ ತಿಳಿಯದೇ ಇರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರ ಮರಣವನ್ನು ಅಪ್ಪಿದ ಮಂಜ ಬೈದ್ಯನ ನೆನಪಿಗೆ ಒಂದು ಪ್ರತಿಮೆ ಅಥವಾ ರಸ್ತೆ ಬಿಡಿ ಒಂದು ಸ್ಮಾರಕ ಕಂಬವೂ ಇರದೇ ಇಂದಿನ ಪೀಳಿಗೆಗೆ ಮಂಜ ಬೈದ್ಯನಂತಹ ಲಕ್ಷಾಂತರ ಹೋರಾಟಗಾರರ ಪರಿಚಯವೇ ಇಲ್ಲದೇ ಇರುವುದು ನಿಜಕ್ಕೂ ದುರಾದೃಷ್ಟಕರವೇ ಸರಿ.

 

ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಈಸ್ಟ್ ಇಂಡಿಯಾ ಕಂಪನಿ ಭಾರತೀಯರಲ್ಲಿ ಒಗ್ಗಟ್ಟಿಲ್ಲದಿದ್ದನ್ನು ಗಮನಿಸಿ ನಮ್ಮ ನಮ್ಮಲ್ಲೇ ಒಡಕನ್ನು ತಂದು ಇಡೀ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಇಡೀ ದೇಶವನ್ನೇ ಲೂಟೀ ಹೊಡೆದ್ದು ಈಗ ಇತಿಹಾಸ. ಆರಂಭದಲ್ಲಿ ರೈತರಿಂದ ಬ್ರಿಟಿಷರು ವಸ್ತುಗಳ ರೂಪದಲ್ಲಿ ಸಂಗ್ರಹಿಸುತ್ತಿದ್ದ ಕಂದಾಯ, ನಂತರ ದಿನಗಳಲ್ಲಿ ಬ್ರಿಟೀಷ್ ಆಧಿಕಾರಿಗಳ ಮೋಜು ಮಸ್ತಿಗೇ ಸಾಲದೇ ಹೋದಾಗ, ಅನಗತ್ಯವಾಗಿ ರೈತರುಗಳ ಮೇಲೆ ಅಧಿಕ ಕಂದಾಯವನ್ನು ಹೇರಿದ್ದಲ್ಲದೇ, ಆ ಕಂದಾಯವನ್ನು ಹಣದ ರೂಪದಲ್ಲೇ ಕೊಡಬೇಕೆಂಬ ಆದೇಶವನ್ನು ಜಾರಿಗೆ ತಂದಾಗ ಸಹಜವಾಗಿ ಸ್ಥಲಿಯರಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದಲ್ಲದೇ, ಜನರು ಬ್ರಿಟೀಷರ ವಿರುದ್ಧ ಬಂಡಾಯ ಏಳಲು ಸಿದ್ಧರಾದಾಗ, ಅದರ ನಾಯಕತ್ವ ವಹಿಸಿಕೊಂಡವರೇ, ಶ್ರೀ ಕೆದಂಬಾಡಿ ರಾಮಗೌಡರು

ಸ್ಥಳೀಯರು ಈ ಬಂಡಾಯಗಾರರ ಸೈನ್ಯವನ್ನು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆಯಲಾರಂಭಿಸದ್ದಲ್ಲದೇ, ಕೆದ೦ಬಾಡಿ ರಾಮಗೌಡರ ನೇತೃತ್ವದಲ್ಲಿದ್ದ ಆ ಸೈನ್ಯ ಬ್ರಿಟೀಷರ ವಿರುದ್ಧ ಗೆರಿಲ್ಲಾ ಮಾದರಿಯಲ್ಲಿ ಸಣ್ಣ ಪುಟ್ಟ ಹೋರಾಟಗಳನ್ನು ನಡೆಸಲು ಆರಂಭಿಸಿತ್ತು. ಇದೇ ಸಮಯದಲ್ಲೇ, ಉಪ್ಪಿನಂಗಡಿಯಲ್ಲಿ ಬ್ರಿಟೀಷರ ಖಜಾನೆಯ ಗುಮಾಸ್ತನಾಗಿದ್ದ ಮಂಜ ಬೈದ್ಯನಿಗೂ ಸಹಾ ಈ ಹೋರಾಟದಲ್ಲಿ ಭಾಗಿಯಾಗುವ ಹಂಬಲವಿತ್ತಾದರೂ, ಆತ ಬ್ರಿಟಿಷಯರ ಬಳಿ ಕೆಲಸಕ್ಕಿದ್ದ ಕಾರಣ ನೇರವಾಗಿ ಭಾಗಿಯಾಗಲಾರದೇ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಆತನಿಗೆ ಇಂಗ್ಲಿಷ್ ಭಾಷೆ ಚೆನ್ನಾಗಿ ಗೊತ್ತಿದ್ದ ಕಾರಣ, ಅನೇಕ ಬ್ರಿಟೀಷ್ ಅಧಿಕಾರಿಗಳನ್ನು ಚನ್ನಾಗಿ ಪರಿಚಯ ಮಾಡಿಕೊಂಡು ಬ್ರಿಟೀಷರಿಗೆ ಒಂದು ರೀತಿಯ ನಂಬಿಕಸ್ಥ ಎಂದೇ ಖ್ಯಾತಿ ಪಡೆದಿದ್ದ. ಅದೊಂದು ದಿನ ಕಲ್ಯಾಣಪ್ಪನ ಸೈನ್ಯ ತನ್ನೂರಿನ ಕಡೆ ಬರುತ್ತಿದೆ ಎಂಬ ಸುದ್ದಿ ಕೇಳಿದ ತಕ್ಷಣವೇ ಆತನಲ್ಲಿದ್ದ ಸ್ವಾತ್ರಂತ್ಯ್ರದ ತುಡಿತ ಜಾಗೃತವಾಗಿ ಕೂಡಲೇ, ತಾನು ಕೆಲಸ ಮಾಡುತ್ತಿದ್ದ ಉಪ್ಪಿನಂಗಡಿ ತಾಲೂಕು ಕಛೇರಿಯಲ್ಲಿ ಇದ್ದವರನ್ನೆಲ್ಲ ಬಂಧಿಸಿ, ಅಲ್ಲಿನ ಖಜಾನೆಯ ಬೀಗ ಒಡೆದು, ಅದರಲ್ಲಿದ್ದ ಸಂಪತ್ತನ್ನೆಲ್ಲಾ ತೆಗೆದುಕೊಂಡು ಇತರೇ ಐವತ್ತು ಮಂದಿ ದೇಶಭಕ್ತ ಯುವಕರೊಂದಿಗೆ ಪುತ್ತೂರಿಗೆ ಬಂದು ಅಲ್ಲಿ ಬೀಡು ಬಿಟ್ಟಿದ್ದ ಕಲ್ಯಾಣಪ್ಪನ ಸೈನ್ಯಕ್ಕೆ ತಾನು ತಂದಿದ್ದ ಕಾಣಿಕೆಯನ್ನು ಅರ್ಪಿಸಿ ಕಲ್ಯಾಣಪ್ಪನ ಸೈನ್ಯಕ್ಕೆ ಸೇರಿಕೊಂಡ.

ಅಲ್ಲಿಯವರೆಗೂ ಕಲ್ಯಾಣಪ್ಪನ ಸೈನ್ಯದ ಉಸ್ತುವಾರಿಯನ್ನು ಹೊತ್ತಿದ್ದ ರಾಮಗೌಡರಿಗೆ ಇಂಗ್ಲೀಷ್ ಬಲ್ಲ ಮತ್ತು ಬ್ರಿಟೀಷರ ಒಳಹೊರಹವನ್ನು ಬಲ್ಲ ವೀರ ಮತ್ತು ಶೂರ ಕಟ್ಟಾಳು ಉಪ್ಪಿನಂಗಡಿ ಮಂಜ ಬೈದ್ಯ ಕಲ್ಯಾಣಪ್ಪನ ಸೈನ್ಯವನ್ನು ಸೇರಿಕೊಂಡ ನಂತರ ಆನೆಯ ಬಲ ಬಂದಂತಾಯಿತು. ಕೂಡಲೇ ಆತನನ್ನು ಉಪ ದಂಡನಾಯಕನನ್ನಾಗಿ ನೇಮಕ ಮಾಡುವ ಮೂಲಕ ಕಲ್ಯಾಣಪ್ಪನ ಸೈನ್ಯದ ಬಲ ನೂರ್ಮಡಿಯಾಯಿತು ಎಂದರೂ ಅತಿಶಯವಲ್ಲಾ. ರಾಜನ ಪೋಷಾಕಿನಲ್ಲಿ ಕಲ್ಯಾಣಪ್ಪ, ದಂಡನಾಯಕರ ಪೋಷಾಕಿನಲ್ಲಿ ಮಂಜ ಬೈದ್ಯ ಮತ್ತು ರಾಮಗೌಡ ಕುದುರೆ ಏರಿ ಹೋರಟರೆಂದರೆ ಅಲ್ಲಿ ಜಯ ಕಟ್ಟಿಟ್ಟ ಬುತ್ತಿ ಎಂಬತಾಯಿತು.

1837 ಎಪ್ರಿಲ್ 5 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದ ಈ ಕ್ರಾಂತಿವೀರರು ಅಲ್ಲಿದ್ದ ಬ್ರಿಟಿಷ್ ಜಾಕ್ ಧ್ವಜವನ್ನು ಇಳಿಸಿ, ಅಲ್ಲಿ ತಮ್ಮ ಕ್ರಾಂತಿಕಾರಿ ಧ್ವಜ ಹಾರಿಸಿ, ಭಾರತ ಮಾತೆಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸುವ ಮೂಲಕ, ಹದಿಮೂರು ದಿನಗಳ ಕಾಲ ದಕ್ಷಿಣ ಕನ್ನಡ ಬ್ರಿಟಿಷರಿಂದ ಸ್ವಾತ್ರಂತ್ಯ್ರವನ್ನು ಪಡೆದಿತ್ತು. ಅಂದು ಹಾಲೇರಿ ಧ್ವಜವನ್ನು ಹಾರಿಸಿದ ಪ್ರದೇಶವನ್ನು ಇಂದಿಗೂ ಜನಾ ಬಾವುಟಗುಡ್ಡ ಎಂದೇ ಗುರುತಿಸುತ್ತಾರೆ. ಈ ರೀತಿಯ ಏಕಾ ಏಕಿ ಆಕ್ರಮಣದಿಂದ ಆರಂಭದಲ್ಲಿ ಬ್ರಿಟೀಷರು ಎದೆ ಗುಂದಿದರಾದರೂ, ಅದನ್ನು ಸಾವರಿಸಿಕೊಂಡು ಕೂಡಲೇ, ಅಕ್ಕ ಪಕ್ಕದ ಪ್ರಾಂತ್ಯಗಳಿಂದ ಮತ್ತು ಕಣ್ಣನೂರಿನಿಂದ ತಮ್ಮ ಬಲವರ್ಧನೆಗಾಗಿ ಸೈನ್ಯವನ್ನು ಕರೆಸಿಕೊಂಡು ಕಲ್ಯಾಣಪ್ಪನವರ ಸೇನೆಯ ಮೇಲೆ ಮುಗಿಬಿದ್ದು, ಈ ಕೆನರಾ ದಂಗೆಯನ್ನು ಬ್ರಿಟಿಷ್ ಸೇನೆಯು ಹತ್ತಿಕ್ಕಿತು.

ಈ ಯುದ್ಧದಲ್ಲಿ ಹಲವಾರು ಸೈನಿಕರು ಮಡಿದರೆ, ಇನ್ನೂ ಕೆಲವರು ಬ್ರಿಟೀಷರ ಕೈಗೆ ಸಿಕ್ಕಿ ಬಿದ್ದರು. ಹಾಗೆ ಬ್ರಿಟೀಶರಿಂದ ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನೂ ಇದ್ದ. ಬ್ರಿಟಿಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜ ಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ (ಪುಟ್ಟಬಸಪ್ಪ), ನಂದಾವರ ಲಕ್ಷ್ಮಪ್ಪ ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು. ತಮ್ಮಲ್ಲಿಯೇ ಕೆಲಸ ಮಾಡಿಕೊಂಡು ತಮ್ಮ ನಂಬಿಕೆಯನ್ನು ಗಳಿಸಿಕೊಂಡು ಕಡೆಗೆ ತಮಗೇ ಮೋಸ ಮಾಡಿದ ಉಪ್ಪಿನಂಗಡಿ ಮಂಜ ಬೈದ್ಯನ ಮೇಲೆ ಬ್ರಿಟೀಷರಿಗೆ ಯಾವ ಪರಿಯಾದ ಕೋಪ ಇತ್ತೆಂದರೆ, ತಮ್ಮ ವಿರುದ್ಧ ಬಂಡಾಯ ಏಳುವವರಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸುತ್ತೇವೆ ಎಂಬುದನ್ನು ಭಾರತೀಯರಿಗೆ ತೋರಿಸುವ ಸಲುವಾಗಿ ಆತನನ್ನು 1837 ಮೇ 27 ರಂದು ಮಂಗಳೂರಿನಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತಲ್ಲದೇ, ಆತನ ಮೃತ ದೇಹವನ್ನು ಅನೇಕ ದಿನಗಳ ಕಾಲ ಅದೇ ಗಲ್ಲುಗಂಬದಲ್ಲೇ ನೇತು ಬಿಟ್ಟು ಶವ ಕೊಳೆತು ನಾರುವಂತೆ ಮಾಡಿದ್ದದ್ದು ಯುದ್ದದಲ್ಲಿ ಮಡಿದ ಸೈನಿಕರಿಗೆ ಕೊಡಬೇಕಾದ ಮರ್ಯಾದೆಯ ವಿರುದ್ಧವಾಗಿದ್ದಲ್ಲದೇ, ಸಮಸ್ತ ಭಾರತೀಯರಿಗೂ ಮಾಡಿದ ಅವಮಾನ ಅದಾಗಿತ್ತು.

 

ಕೆದಂಬಾಡಿ ರಾಮಯ್ಯ ಗೌಡ ಅವರ ಹೋರಾಟದ ಅವಿಸ್ಮರಣೀಯ ಸಂಗತಿಗಳನ್ನು ಮುಂದಿನ ತಲೆಮಾರಿಗೂ ತಿಳಿಸುವ ಆಶಯದಿಂದ ಅವರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿರ್ಮಿಸಲಾಗಿದೆ.

 

ವೀರ ಯೋಧ ಮಂಜ ಬೈದ್ಯನ ವಿರುಧ್ದದ ಬ್ರಿಟೀಷರ ಈ ಪರಿಯ ಹಗೆತನದ ಸುದ್ದಿ ದೇಶಾದ್ಯಂತ ಹರಡಿ, ಬ್ರಿಟೀಷರ ವಿರುದ್ಧ ಹೋರಾಟ ಮಾಡಲು ಅನೇಕ ಹೋರಾಟಗಾರರಿಗೆ ಪ್ರೇರಣೆಯಾಯಿತು. ನಂತರದ ದಿನಗಳಲ್ಲಿ ಬಂದ ಮಂದಗಾಮಿಗಳು ಈ ರೀತಿಯ ಕ್ರಾಂತಿಕಾರಿ ಹೋರಾಟಗಾರರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿದ್ದಲ್ಲದೇ, ಅಹಿಂಸಾತ್ಮಕ ಹೋರಾಟ ಎಂದು ಬ್ರಿಟೀಷರೊಡನೆ ಹೊಂದಾಣಿಕೆಯ ಹೋರಾಟ ನಡೆಸಿದ ಪರಿಣಾಮ, ದೇಶದ ಸ್ವಾತ್ರಂತ್ಯ್ರಕ್ಕೆ ಹೋರಾಟ ನಡೆಸಿದ ಮಂಜ ಬೈದ್ಯನಂತಹ ಲಕ್ಷಾಂತರ ಕ್ರಾಂತಿಕಾರಿಗಳ ತ್ಯಾಗ ಮತ್ತು ಬಲಿದಾನಗಳು ಇಂದಿಗೂ ಸಹಾ ಬೆಳಕಿಗೆ ಬಾರದೇ ಹೋದದ್ದು ನಿಜಕ್ಕೂ ದುರಾದೃಷ್ಟಕರವೇ ಸರಿ.

 

ಉಮಾಸುತ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ