ಸಿಮ್ ಕಾರ್ಡ್ ಬ್ಲಾಕ್ ಮಾಡಿ ಬ್ಯಾಂಕ್ ಖಾತೆಯಿಂದ ₹2 ಲಕ್ಷ ದೋಚಿದ ಖದೀಮರು!
ಸಿಮ್ ಕಾರ್ಡ್ ಬ್ಲಾಕ್ ಮಾಡಿ ಬ್ಯಾಂಕ್ ಖಾತೆಯಿಂದ ₹2 ಲಕ್ಷ ದೋಚಿದ ಖದೀಮರು!
ಜೆರಾಕ್ಸ್ ಅಂಗಡಿ ಮಾಲೀಕರ ಶಿವಕುಮಾರ್ ಎಂಬವರ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿದ್ದ ಸೈಬರ್ ವಂಚಕರು, ನಕಲಿ ದಾಖಲೆಗಳ ಮೂಲಕ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಡ್ರಾ ಮಾಡಿಕೊಂಡು ವಂಚಿಸಿರುವ ಬಗ್ಗೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಸಂದ್ರದ ನಿವಾಸಿ ಶಿವಕುಮಾರ್ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ಮೊಬೈಲ್ ನೆಟ್‌ವರ್ಕ್ ದಿಢೀರ್ ಬಂದ್ ಆಗಿತ್ತು. ಮೊಬೈಲ್ ಸರ್ವಿಸ್ ಪ್ರೊವೈಡರ್ ಕಂಪನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಹಳೆಯ ಸಿಮ್‌ಕಾರ್ಡ್ ಬ್ಲಾಕ್ ಆಗಿದ್ದು, ಹೊಸ ಸಿಮ್ ಕಾರ್ಡ್ ಖರೀದಿಸುವಂತೆ ಸೂಚಿಸಿದ್ದರು. ಅದರಂತೆ ಹೊಸ ಸಿಮ್ ಕಾರ್ಡ್ ಖರೀದಿಸಿ ಅದನ್ನು ಮೊಬೈಲ್‌ಗೆ ಹಾಕುತ್ತಿದ್ದಂತೆಯೇ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 2 ಲಕ್ಷ ಹಣ ಡ್ರಾ ಆಗಿರುವ ಕುರಿತು ಸಂದೇಶ ಬಂದಿದೆ. ಈ ಬಗ್ಗೆ ಶಿವಕುಮಾರ್ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅಪರಿಚಿತರು ಮೊಬೈಲ್ ಸಂಖ್ಯೆ ಬಳಸಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಶಿವಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಂಚನೆ ಹೇಗೆ?
ಗ್ರಾಹಕರ ಬಳಿ ಚಾಲ್ತಿಯಲ್ಲಿರುವ ಮೊಬೈಲ್ ಸಿಮ್‌ಕಾರ್ಡ್ ಬ್ಲಾಕ್ ಮಾಡಿಸುವ ಸೈಬರ್ ವಂಚಕರು, ನಕಲಿ ದಾಖಲೆ ಬಳಸಿ ಹೊಸ ಸಿಮ್‌ಕಾರ್ಡ್‌ಗಳನ್ನು ಖರೀದಿಸಿ ಮೋಸ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಶಿವಕುಮಾರ್ ಅವರ ಸಿಮ್‌ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ನಕಲಿ ದಾಖಲೆ ನೀಡಿ ಹೊಸ ಸಿಮ್‌ಕಾರ್ಡ್ ಖರೀದಿಸಿದ್ದಾರೆ. ಬ್ಯಾಂಕ್‌ಗೆ ಸಂಬಂಧಪಟ್ಟ ದಾಖಲೆಗಳನ್ನೂ ನಕಲಿಸಿ, ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಬಳಸಿ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಅಷ್ಟೇ ಅಲ್ಲದೇ ಬ್ಲಾಕ್ ಆದ ಸಿಮ್‌ಕಾರ್ಡ್ ಬದಲಿಸಿ, ಹೊಸ ಸಿಮ್‌ಕಾರ್ಡ್ ಖರೀದಿಸಿ ಬಳಕೆ ಮಾಡುತ್ತಿರುವ ಸಂದರ್ಭದಲ್ಲೂ ವಂಚಕರು ಕರೆ ಮಾಡುತ್ತಾರೆ. ಆಯಕ್ಟಿವೇಷನ್ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಹೇಳಿ, ಬಳಕೆದಾರರಿಂದ ಒಟಿಪಿ ಪಡೆದು ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ತಂತ್ರಜ್ಞಾನದ ಬೆಳವಣಿಗೆಯನ್ನು ಉತ್ತಮ ಕೆಲಸಗಳಿಗೆ ಬಳಸುವುದಕ್ಕಿಂತ ಈ ರೀತಿಯ ವಂಚನೆಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಸ್ಟಮರ್ ಕೇರ್ ನಂಬರ್ ಹುಡುಕಲು ಹೋದ ದಂಪತಿಗಳು…!:
ಅಂತರ್ಜಾಲದಲ್ಲಿ ಪಾತ್ರೆ ತೊಳೆಯುವ ಯಂತ್ರ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಲು ಹೋಗಿ ಉತ್ತರ ಪ್ರದೇಶದ ನೋಯ್ಡಾ ಮೂಲದ ವೃದ್ಧ ದಂಪತಿಯೊಬ್ಬರು 8.24 ಲಕ್ಷ ರೂ ಕಳೆದುಕೊಂಡಿದ್ದರು. ಕಳೆದ ಜನವರಿ 21ರಂದು ಗೂಗಲ್‌ನಲ್ಲಿ ಐಎಫ್‌ಬಿ ಡಿಶ್‌ವಾಶರ್‌ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಪತ್ನಿ ರಾಜಿಂದರ್ ಅರೋರಾ ಹುಡುಕಿದ್ದರು. ಈ ವೇಳೆ ಆನ್ಲೈನ್ನಲ್ಲಿ ನಕಲಿ ಸಂಖ್ಯೆಗಳಿಗೆ ತಮ್ಮ ಮಾಹಿತಿ ನೀಡಿದ್ದಾರೆ. ಜನವರಿ 22 ಮತ್ತು 23ರಂದು ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ಮೂಲಕ ವಂಚಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.