ಆಪ್ ಮುಖಾಂತರ ಲೋನ್ ಪಡೆಯುವವರೆ ಎಚ್ಚರ!
ಜೀವ ಪಡೆದ ಲೋನ್ ಆ್ಯಪ್
ಚೀನಾ ಆ್ಯಪ್ ಮೂಲಕ ಲೋನ್ ಪಡೆದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೇಜಸ್(22) ಆತ್ಮಹತ್ಯೆ ಮಾಡಿಕೊಂಡಾತ. ಸ್ನೇಹಿತ ಮಹೇಶ್ ಗಾಗಿ ಸ್ಟೈಸ್ ಪೇ, ಕಿಸಾತ್ ಆ್ಯಪ್ ಗಳ ಮೂಲಕ ಸಾಲ ಪಡೆದಿದ್ದ. ಆದರೆ, ವರ್ಷದಿಂದ ಮಹೇಶ್ EMI ಕಟ್ಟಿರಲಿಲ್ಲ. ಹೀಗಾಗಿ, ಸಾಲ ಕಟ್ಟದಿದ್ದರೆ ಸಂಬಂಧಿಕರ ಬೆತ್ತಲೆ ಫೋಟೋ ವೈರಲ್ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸಂಪೂರ್ಣ ವಿವರ:
ಚೀನಾ ಆ್ಯಪ್ ಮೂಲಕ ಲೋನ್ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಹೆಚ್ಎಂಟಿ ಕ್ವಾರ್ಟರ್ಸ್ನಲ್ಲಿ ನಡೆದಿದೆ. ತೇಜಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ಟಾರ್ಚರ್ ನೀಡುತ್ತಿದ್ದರಂತೆ. ಹಾಗಾಗಿ ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
‘ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ’ ‘ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ’ ‘ಥ್ಯಾಂಕ್ಸ್ ಗುಡ್ ಬೈ’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದಿದ್ದಾರೆ.
ಒಂದು ವರ್ಷದ ಹಿಂದೆ ಒಂದು ದಂಪತಿಗಳಿಗೆ ಹೀಗೆ ನಡೆದಿತ್ತು:
ಲೋನ್ ಆಪ್ ಕಿರುಕುಳದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಲೋನ್ ಆಪ್ ಕಿರುಕುಳದ ಬಗ್ಗೆ ಈ ಹಿಂದೆಯೂ ಸಾಕಷ್ಟು ಈ ರೀತಿಯ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಲೋನ್ ಆಪ್ ಸಹವಾಸ ಮಾಡದಂತೆ ಹಲವು ಮಾಧ್ಯಮಗಳಲ್ಲಿ ವರದಿಗಳಾಗಿದ್ದವು, ಅಲ್ಲದೇ ಕಿರುಕುಳಕ್ಕೊಳಗಾದವರು ಕೂಡ ಪೊಲೀಸರಿಗೆ ದೂರು ನೀಡಿದ ಪೊಲೀಸರು ಕೂಡ ಈ ಬಗ್ಗೆ ಸುದ್ದಿಗೋಷ್ಠಿಗಳಲ್ಲಿ ಮಾಹಿತಿ ನೀಡಿದ್ದರು. ಈ ಮಧ್ಯೆ ಲೋನ್ ಆಪ್ ಅನಾಹುತದ ಬಗ್ಗೆ ತಿಳಿಯದೇ ಗುಂಡಿಗೆ ಬಿದ್ದ ದಂಪತಿ ಈಗ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.
ಲೋನ್ ಆಪ್‌ಗಳು ನೀಡುತ್ತಿದ್ದ ಕಿರುಕುಳ ತಾಳಲಾರದೇ ತಮ್ಮ ಮಗಳೊಬ್ಬಳ ಹುಟ್ಟುಹಬ್ಬದ ದಿನವೇ ದಂಪತಿ ವಿಷ ಸೇವಿಸಿ ಇಹಲೋಕ ತ್ಯಜಿಸಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳು ಹೇಳುವಂತೆ, ಕೊಲ್ಲಿ ದುರ್ಗಾ ರಾವ್ ಎಂಬುವವರು ಅಲ್ಲೂರಿ ಸೀತಾರಾಮ್ ರಾಜು ಜಿಲ್ಲೆಯ ಲಬ್ಬರ್ಥಿ ಗ್ರಾಮದವರಾಗಿದ್ದು, ಜೀವನ ಕಟ್ಟಿಕೊಳ್ಳುವುದಕ್ಕಾಗಿ 10 ವರ್ಷಗಳ ಹಿಂದೆ ರಾಜಮಹೇಂದ್ರವರಮ್‌ಗೆ ಆಗಮಿಸಿದ್ದರು. ಆರು ವರ್ಷಗಳ ಹಿಂದೆ ಇವರು ರಮ್ಯಾ ಲಕ್ಷ್ಮಿ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ನಾಗಸಾಯಿ ಹಾಗೂ ಎರಡು ವರ್ಷದ ಲಿಖಿತಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಟ್ಟು ಮಕ್ಕಳು ಸೇರಿ ನಾಲ್ವರಿದ್ದ ಕುಟುಂಬ ರಾಜಮಹೇಂದ್ರವರಮ್‌ನ ಶಾಂತಿನಗರದಲ್ಲಿ ವಾಸವಾಗಿದ್ದರು.
ದುರ್ಗಾ ರಾವ್ ವೃತ್ತಿಯಲ್ಲಿ ಓರ್ವ ಪೈಂಟರ್ ಆಗಿದ್ದು, ರಮ್ಯಾ ಲಕ್ಷ್ಮಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿಎದುರಾದ ಕೆಲ ಆರ್ಥಿಕ ಸಂಕಷ್ಟದಿಂದಾಗಿ ಇವರು ಎರಡು ಆನ್ಲೈನ್ ಮೊಬೈಲ್ ಆಪ್‌ಗಳ ಮೂಲಕ ಲೋನ್‌ಗೆ ಅರ್ಜಿ ಸಲ್ಲಿಸಿ ಸಾಲ ಪಡೆದಿದ್ದರು. ಆದರೆ ಅವರಿಗೆ ನಿಗದಿತ ಸಮಯಕ್ಕೆ ಈ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಲೋನ್ ಆಪ್ ಸಿಬ್ಬಂದಿ ಇವರಿಗೆ ಕರೆ ನೀಡಿ ಕಿರುಕುಳ ನೀಡಲು ಶುರು ಮಾಡಿದ್ದರು. ಈ ನಡುವೆ ದಂಪತಿ ಸಾಲದ ಸ್ವಲ್ಪಮೊತ್ತವನ್ನು ಪಾವತಿ ಮಾಡಿದ್ದರು. ಆದರೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲಾಗಿರಲಿಲ್ಲ.
ಹೀಗಾಗಿ ಲೋನ್ ಆಪ್ ಸಂಸ್ಥೆ ಆಗಾಗ ಇವರಿಗೆ ಕರೆ ಮಾಡಿ ಹಣ ಪಾವತಿ ಮಾಡುವಂತೆ ಕೇಳಿತ್ತು. ಈ ಮಧ್ಯೆ ಈ ದಂಪತಿಗೆ ರಮ್ಯಾಲಕ್ಷ್ಮಿಯ ಫೋಟೋಗಳನ್ನು ಅಶ್ಲೀಲಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಹೀಗಾಗಿ ಲೋನ್ ಪಾವತಿ ಮಾಡುವ ಸಲುವಾಗಿ ದುರ್ಗಾರಾವ್ ತಮ್ಮ ಪೇಂಟಿಂಗ್ ಕೆಲಸದ ಜೊತೆ ಡೆಲಿವರಿ ಬಾಯ್ ಆಗಿಯೂ 10 ದಿನಗಳ ಹಿಂದಷ್ಟೇ ಕೆಲಸ ಮಾಡಲು ಶುರು ಮಾಡಿದ್ದರು. ಅಲ್ಲದೇ ಹೆಚ್ಚಿನ ಹಣ ಸಂಪಾದನೆಗೆ ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದರು.
ಈ ನಡುವೆ ರಮ್ಯಾ ಅವರಿಗೆ ಕಿರುಕುಳ ಹೆಚ್ಚಿಸಿದ ಲೋನ್ ಆಪ್, ಆಕೆಯ ವಿರೂಪಗಳಿಸಿದ ಅಶ್ಲೀಲ ಫೋಟೋವೊಂದನ್ನು ಆಕೆಗೇ ವಾಟ್ಸಾಪ್ ಮೂಲಕ ಕಳುಹಿಸಿ, ಎರಡು ದಿನಗಳಲ್ಲಿ ಲೋನ್ ಕಟ್ಟದಿದ್ದರೆ ಶೀಘ್ರದಲ್ಲೇ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದರು.
ಇದಾದ ನಂತರ ದಂಪತಿ ಸೆಪ್ಟೆಂಬರ್ 5 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ಹೋಗಿದ್ದು, ಅಲ್ಲಿ ನಗರದ ಗೋದಾವರಿ ನದಿಯ ಬಂಡ್‌ನಲ್ಲಿರುವ ಹೋಟೆಲ್‌ನಲ್ಲಿ ಉಳಿದಿದ್ದಾರೆ.ಮಧ್ಯರಾತ್ರಿಯ ನಂತರ, ರಮ್ಯಾ ತನ್ನ ಸೋದರ ಸಂಬಂಧಿಗೆ ಕರೆ ಮಾಡಿ ತಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಮಕ್ಕಳಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ.
ಸೋದರ ಸಂಬಂಧಿ ಶೀಘ್ರದಲ್ಲೇ ಇತರ ಸಂಬಂಧಿಕರನ್ನು ಕರೆದುಕೊಂಡು ಹೋಟೆಲ್ ಕೋಣೆಗೆ ತಲುಪುವಷ್ಟರಲ್ಲಿ ದಂಪತಿಗಳು ಪ್ರಜ್ಞಾಹೀನರಾಗಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ದಂಪತಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ವೇಳೆ ದಂಪತಿ ಮೃತಪಟ್ಟಿದ್ದಾರೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಲಿಗೆ ಮಾಡುತ್ತಿದ್ದುದು ಹೀಗೆ:
ಕ್ಯಾಶ್ ಪೋರ್ಚ್, ರುಪಿ ವೇ, ಲೋನ್ ಕ್ಯೂಬ್, ವೋವ್ ರುಪಿ, ಸ್ಮಾರ್ಚ್ ವ್ಯಾಲೆಟ್, ಜಯಂಟ್ ವ್ಯಾಲೆಟ್, ಸ್ವಿಫ್‌ಟರುಪಿ, ಹಾಯ್ ರುಪಿ, ವ್ಯಾಲೆಟ್‌ವಿನ್, ಫಿಶ್‌ಕ್ಲಬ್, ಯಾಕ್ಯಾಶ್, ಐಆ್ಯಮ್ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕ್ಯಾಶ್, ಫಾರ್ಚೂನ್ ಟ್ರೀ, ಸೂಪರ್‌ಕಾಯಿನ್, ರೆಡ್ ಮ್ಯಾಜಿಕ್ ಮುಂತಾದ ಹೆಸರಿನಲ್ಲಿ ಉತ್ತರ ಪ್ರದೇಶದ ವಂಚಕರ ತಂಡ ಮೊಬೈಲ್ ಆ್ಯಪ್‌ಗಳನ್ನು ನಡೆಸುತ್ತಿತ್ತು. ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಎಲ್ಲಾ ಪರ್ಮಿಷನ್‌ಗಳನ್ನು ನೀಡಿದರೆ ಅವರ ಮೊಬೈಲ್‌ನ ಸಮಗ್ರ ಡೇಟಾ ವಂಚಕರ ಕೈಗೆ ಸಿಗುತ್ತಿತ್ತು ಮತ್ತು ಚೀನಾದ ಸರ್ವರ್‌ಗೆ ಹೋಗುತ್ತಿತ್ತು. ಡೌನ್‌ಲೋಡ್ ಮಾಡಿಕೊಂಡ ಜನರಿಗೆ ಕೂಡಲೇ ಸಾಲ ಸಿಗುತ್ತಿತ್ತು. ಆದರೆ ಆ ಸಾಲವನ್ನು ಬಡ್ಡಿ ಸಮೇತ ತೀರಿಸಿದ ಮೇಲೂ ವಂಚಕರು ಕರೆ ಮಾಡಿ ನಿಮ್ಮ ಖಾಸಗಿ ಫೋಟೋಗಳನ್ನು ಅಶ್ಲೀಲವಾಗಿ ತಿರುಚಿ ನಿಮ್ಮೆಲ್ಲಾ ಪರಿಚಯದವರಿಗೆ ಕಳುಹಿಸುತ್ತೇವೆ, ಹಾಗೆ ಮಾಡಬಾರದು ಅಂದರೆ ಇಂತಿಷ್ಟುಹಣ ಕೊಡಿ ಎಂದು ಸುಲಿಗೆ ಮಾಡುತ್ತಿದ್ದರು. ಆ ಹಣವನ್ನು ಹವಾಲಾ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ಚೀನಾಕ್ಕೆ ಕಳುಹಿಸುತ್ತಿದ್ದರು.