10 ಕೋಟಿ ರೂಪಾಯಿ ಲಾಟರಿ ಗೆದ್ದ ಕೇರಳದ ಪೌರ ಕಾರ್ಮಿಕ ಮಹಿಳೆಯರು
10 ಕೋಟಿ ರೂಪಾಯಿ ಲಾಟರಿ ಗೆದ್ದ ಕೇರಳದ ಪೌರ ಕಾರ್ಮಿಕ ಮಹಿಳೆಯರು
ಅದೃಷ್ಟ ಯಾರಿಗೆ ಯಾವಾಗ ಒಲಿದು ಬರುತ್ತದೆ ಎಂದು ಹೇಳಲು ಆಗದು, ಕೆಲವೊಮ್ಮೆ ಜೀವನಪೂರ್ತಿ ಲಾಟರಿ ಟಿಕೆಟ್ ಖರೀದಿ ಮಾಡಿದರೂ ವಿಜೇತರಾಗುವುದು ಕಷ್ಟ, ಅದೃಷ್ಟವಿದ್ದರೆ ಕುತೂಹಲಕ್ಕೆ ಲಾಟರಿ ಖರೀದಿಸಿ ಕೋಟ್ಯಧಿಪತಿಗಳಾದವರು ಇದ್ದಾರೆ. 11 ಪೌರ ಕಾರ್ಮಿಕ ಮಹಿಳೆಯರು ಸೇರಿ ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದು ಅದೃಷ್ಟ ಒಲಿದು ಬಂದಿದೆ. ಹೌದು, ಈ ಮಹಿಳೆಯರು ಖರೀದಿ ಮಾಡಿದ 10 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಮಹಿಳೆಯರ ಬದುಕೇ ಬದಲಾಗಲಿದೆ.ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್ ಬಂಪರ್ ಆಪರ್ ವಿಜೇತರನ್ನು ಘೋಷಣೆ ಮಾಡಿದ್ದು, ಪರಪ್ಪನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ’ಯ 11 ಮಹಿಳೆಯರು ಬಹುಮಾನ ಗೆದ್ದಿದ್ದಾರೆ. ನಮಗೆ ಜಾಕ್‌ಪಾಟ್ ಹೊಡೆದಿದೆ ಎಂದು ತಿಳಿದಾಗ ಉತ್ಸಾಹ ಮತ್ತು ಸಂತೋಷಕ್ಕೆ ಮಿತಿಯಿರಲಿಲ್ಲ, ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ ಮತ್ತು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣವು ನಮಗೆ ನೆರವಾಗಲಿದೆ ಎಂದು ಮಹಿಳೆಯರು ಹೇಳಿದ್ದಾರೆ.ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ. ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ.
ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ.ಟಿಕೆಟ್ ಸಂಖ್ಯೆ MB 200261 ಮೊದಲ ಬಹುಮಾನ 10 ಕೋಟಿ ರೂ. ಬಹುಮಾನದ ಚೀಟಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪರಪ್ಪನಂಗಡಿ ಶಾಖೆಗೆ ಹಸ್ತಾಂತರಿಸಲಾಗಿದೆ. ಪಾಲಕ್ಕಾಡ್‌ನಲ್ಲಿ ಏಜೆಂಟ್ ಕಾಜಾ ಹುಸೇನ್ ಮಾರಾಟ ಮಾಡಿದ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿದೆ. ಈ ಬಾರಿ ಲಾಟರಿ ನಿರ್ದೇಶನಾಲಯದಿಂದ 27 ಲಕ್ಷ ಮಾನ್ಸೂನ್ ಬಂಪರ್ ಟಿಕೆಟ್ ಮುದ್ರಿಸಲಾಗಿದೆ.ಇದೇ ವೇಳೆ ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ತಲಾ ಐವರಿಗೆ ಕ್ರಮವಾಗಿ 10 ಲಕ್ಷ, 5 ಲಕ್ಷ ಹಾಗೂ 3 ಲಕ್ಷ ರೂಪಾಯಿಗಳು ಸಿಗಲಿವೆ.