• 8 ಸೆಪ್ಟೆಂಬರ್ 2024

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ನಡೆಯಲಿದೆ 

Digiqole Ad

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ನಡೆಯಲಿದೆ 

ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮಾಚರಣೆ ಸಲುವಾಗಿ ಬೆಂಗಳೂರಿನಲ್ಲೇ ತುಳುನಾಡಿನ ಕಂಬಳ ನಡೆಸಲು ನಿರ್ಧರಿಸಲಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ’ ನಡೆಯಲಿದೆ. ಅವಿಭಾಜಿತ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದ ಕಂಬಳ ಕೂಟ ಇದೇ ಮೊದಲ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.ಕಂಬಳ ವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ . ಕಂಬಳ ಕೂಟದ ನೇತೃತ್ವ ವನ್ನು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ವಹಿಸಿಕೊಳ್ಳಲಿದ್ದಾರೆ.

ಕರಾವಳಿಯಲ್ಲಷ್ಟೇ ನಡೆಯುವ ಹಾಗೂ ಅಲ್ಲಿ ಮಾತ್ರ ನಡೆಸಬಹುದಾದ ಕಂಬಳ ಕ್ರೀಡೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ಮುಂದಾಗಿದ್ದಾರೆ. ಅರಮನೆ ಮೈದಾನದಲ್ಲಿ ನಡೆಸಲು ನಿರ್ಧರಿಸಿದ ಕಂಬಳಕ್ಕೆ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೊಡುಕರೆ ಕಂಬಳ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.

ಬೆಂಗಳೂರಿನ ತುಳುಕೂಟ ಸಮಿತಿ 50 ನೇ ವರ್ಷವನ್ನು ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದು, ಕಂಬಳ ಕೂಟದೊಂದಿಗೆ ವಿಶ್ವ ತುಳು ಸಮ್ಮೇಳನ ಕೂಡ ಆಯೋಜಿಸಲಿದೆ. ಮೈಸೂರಿನ ಒಡೆಯರ್ ಕುಟುಂಬದ ಜಾಗವಾದ ಅರಮನೆ ಮೈದಾನದಲ್ಲಿ ಕಂಬಳ ಮಾಡುವ ಬಗ್ಗೆ ಈಗಾಗಲೇ ಮೈಸೂರು ಮಹಾರಾಣಿ ಹಾಗೂ ಯುವರಾಜರ ಅನುಮತಿ ಕೂಡ ಸಿಕ್ಕಿದ್ದು, ಸರ್ಕಾರದ ಅನುಮತಿ ಸಿಗಲು ಮಾತ್ರ ಬಾಕಿಯಿದೆ.ಕಂಬಳ ಕೂಟಕ್ಕೆ ಕೋಣಗಳನ್ನು ಸಾಗಿಸುವ ಬಗ್ಗೆ ಈಗಾಗಲೆ ಮೊದಲ ಹಂತದ ಮಾತುಕತೆ ನಡೆಯುತ್ತಿದೆ. ಕೋಣಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ವೆಚ್ಚ ಜಾಸ್ತಿ ಆಗುವ ಕಾರಣ ಹಾಗೂ ಜೊತೆಗೆ ಕೋಣಗಳಿಗೆ ಆಯಾಸವು ಆಗಬಹುದು ಎಂಬ ಉದ್ದೇಶದಿಂದ ಅದಕ್ಕಾಗಿ ರೈಲಿನಲ್ಲಿ ಸಾಗಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಸೆಮಿ ಫೈನಲ್ ಹಂತಕ್ಕೆ ಬಂದ 50 ಜೋಡಿಗಳಷ್ಟು ಕೋಣಗಳನ್ನು ಬೆಂಗಳೂರಿನ ಕೂಟದಲ್ಲಿ ಓಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೋಣಗಳಿಗೆ ದಕ್ಷಿಣ ಕನ್ನಡದ ನೀರಿನಲ್ಲಿ ಓಡಿ, ಅದನ್ನು ಕುಡಿದು ಅಭ್ಯಾಸವಿದೆ ಆದರೇ ಬೆಂಗಳೂರಿನ ನೀರನ್ನು ಕೋಣಗಳು ಸೇವಿಸಬಹುದೇ ಎನ್ನುವ ಪರೀಕ್ಷೆ ನಡೆಸುತ್ತಿದ್ದೇವೆ. ಈಗಾಗಲೇ ಪುಣೆಯ ಲ್ಯಾಬ್ ಹಾಗೂ ಬೆಂಗಳೂರಿನ ಲ್ಯಾಬ್ ಗೆ ಪರೀಕ್ಷೆಗೆ ನೀರನ್ನು ಕಳಿಸಲಾಗಿದೆ.

ಕಾಂತಾರ ಸಿನಿಮಾದ ಮೂಲಕ ಜಗತ್ತಿಗೆ ಅತಿಹೆಚ್ಚು ಚಿರಪರಿಚಿತವಾದ ಕೆಸರಿನ ಗದ್ದೆಯಲ್ಲಿ ಶರವೇಗದಲ್ಲಿ ಓಡುವ ಕೋಣಗಳ ಕಂಬಳವನ್ನು ಈಗ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ದಿನಗಣನೆ ಆರಂಭವಾಗಿದ್ದು, ತುಳು ಕೂಟದಿಂದ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಪರಿಶೀಲನೆ ಕೂಡ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದರು.

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ