ಮಹಾಭಾರತದಲ್ಲಿ ಕರ್ಣ ಕೃಷ್ಣನ ಹತ್ರ ಕೇಳ್ತಾನೆ..
ಮಹಾಭಾರತದಲ್ಲಿ ಕರ್ಣ ಕೃಷ್ಣನ ಹತ್ರ ಕೇಳ್ತಾನೆ..
ನಮ್ಮಮ್ಮ ನನ್ನನ್ನ ಹಡೆದಕೂಡ್ಲೆ ನದೀಲಿ ತೇಲಿಸಿ ಬಿಟ್ಟೋದ್ಲು. ಅವ್ಳು ಮದ್ವೆಗೆ ಮೊದ್ಲೇ ನನ್ನ ಹೆತ್ತಿದ್ದು ನನ್ನ ತಪ್ಪಾ?
ದ್ರೋಣಾಚಾರ್ಯರು ನಾನು ಕ್ಷತ್ರಿಯ ಅಲ್ಲ ಅನ್ನೋ ಕಾರಣ ಕೊಟ್ಟು ನಂಗೆ ವಿದ್ಯೆ ಕಲಿಸಲಿಲ್ಲ.
ಅದೇ..ಪರಶುರಾಮರು ನಾನೊಬ್ಬ ಕ್ಷತ್ರಿಯ ಅನ್ನೋ ಕಾರಣಕ್ಕೆ ತಮ್ಮಿಂದ ಕಲಿತ ವಿದ್ಯೆಯೆಲ್ಲ ಸಮಯಕ್ಕೆ ಬಾರದಿರಲಿ ಎಂದು ಶಪಿಸಿಬಿಟ್ಟರು
ನಾನು ಕ್ಷತ್ರಿಯನೋ ಸೂತಪುತ್ರನೋ ಅಂತ ನಂಗೇ ಗೊತ್ತಿರಲಿಲ್ಲ. ಇದ್ರಲ್ಲಿ ನನ್ನ ತಪ್ಪೇನಿತ್ತು ಹೇಳು.
ಎಲ್ಲೋ ಅಕಸ್ಮಾತ್ತಾಗಿ ನನ್ನ ಬಾಣ ಹಸುವೊಂದನ್ನು ಕೊಂದುಬಿಟ್ಟಿತು. ಗೊತ್ತಿಲ್ಲದೇ ಆದ ತಪ್ಪಿಗೂ ನಾನು ಶಾಪಗ್ರಸ್ತನಾದೆ.
ನನ್ನದಲ್ಲದ ತಪ್ಪಿಗೆ ದ್ರೌಪದಿ ಸ್ವಯಂವರದಲ್ಲಿ ನಾನು ಅವಮಾನ ಅನುಭವಿಸೋ ಹಾಗಾಯ್ತು
ಹೆತ್ತತಾಯಿಯೇ ಆದ್ರೂ ಕುಂತಿ ತನ್ನ ಉಳಿದ ಮಕ್ಕಳು ಪಾಂಡವರನ್ನು ಉಳಿಸಿಕೊಳ್ಳೋಕೋಸ್ಕರ ನನ್ನ ಬಳಿ ಬಂದು ಸಮಯವಲ್ಲದ ಸಮಯದಲ್ಲಿ ಸತ್ಯ ಹೇಳಿ ಮಾತುಪಡೆದು ಹೊರಟು ನನ್ನನ್ನು ಧರ್ಮಸಂಕಟಕ್ಕೆ ಸಿಲುಕಿಸಿಬಿಟ್ಟಳು.
ಎಲ್ಲರಿಂದಲೂ ನನಗಾದದ್ದು ಅನ್ಯಾಯವೇ ಅವಮಾನವೇ ಮೋಸವೇ ದುಃಖವೇ.
ನಂಗೆ ಬದುಕು ಸ್ಥಾನಮಾನ ಸುಖ ಸಂತೋಷ ಏನೇ ಸಿಕ್ಕಿದ್ದರೂ ಅದು ದುರ್ಯೋಧನನಿಂದ.
ಹೀಗಿರುವಾಗ ನಾನು ದುರ್ಯೋಧನನ ಜೊತೆ ನಿಲ್ಲಬೇಕಿರೋದು ಸರಿ ತಾನೆ. ಅವ್ನು ಕೆಟ್ಟವ್ನೇ ಇರ್ಲಿ ತಪ್ಪೇ ಮಾಡಿರ್ಲಿ ಅವ್ನನ್ನ ಬೆಂಬಲಿಸಬೇಕಿರೋದು ನನ್ನ ಕರ್ತವ್ಯ ಅಲ್ವೇ. ಅದೇ ಧರ್ಮ ಅಲ್ವೇ? ನಾನು ಅವರ ಜೊತೆ ಇರೋದ್ರಲ್ಲಿ ತಪ್ಪೇನಿದೆ?
ಪೂರ್ತಿ ಕೇಳಿಸಿಕೊಂಡ ಕೃಷ್ಣ ಉತ್ತರಿಸುತ್ತಾನೆ..
ಕರ್ಣ…
ನಿಂಗೊತ್ತು ಅಂದ್ಕೋತೀನಿ..ನಾನು ಹುಟ್ಟಿದ್ದು ಸೆರೆಮನೆಯಲ್ಲಿ.
ನಿಮ್ಮಮ್ಮ ನಿನ್ನನ್ನ ಹುಟ್ಟಿದ ಮೇಲೆ ನದೀಲಿ ತೇಲಿ ಬಿಟ್ಲು ಅಂತ ಕೊರಗ್ತೀಯ. ನನ್ನ್‌ಕತೆ ಕೇಳು.. ನಾನು ಹುಟ್ಟೋಕೆ ಮೊದ್ಲೇ ನನ್ನನ್ನ ಕೊಲ್ಲೋಕೆ ಅಂತ ಹಲವಾರು ಸಂಚು ನಡೆದವು. ನಾನು ಹುಟ್ಟೋ ಹೊತ್ತಿಗೆ ನನ್ನ ಸಾವು ನನಗಾಗಿ ಕಾದಿತ್ತು. ಕಂಸ ಪೂತನಿ ಹೀಗೆ ಒಬ್ರಾ ಇಬ್ರಾ ನನ್ನನ್ನು ತೀರಾ ಮಗು ಇದ್ದಾಗ್ಲೇ ಕೊಲ್ಲೋಕೆ ಪ್ರಯತ್ನ ಪಟ್ಟವ್ರು..?
ನಾನು ಕೂಡ ನಿನ್ನ ಹಾಗೇನೇ ಹುಟ್ಟಿದ್ಕೂಡ್ಲೇ ಹೆತ್ತಮ್ಮ ಅಪ್ಪನಿಂದ ದೂರ ಆಗೋ ಹಾಗಾಯ್ತು.
ನೀನಾದ್ರೂ ಬಾಲ್ಯದಿಂದಲೇ ಖಡ್ಗ.. ಕುದುರೆ.. ರಥ.. ಬಿಲ್ಲು ಬಾಣ ಇವನ್ನೆಲ್ಲ ಕಂಡುಕೇಳಿ ಬೆಳೆದೆ. ನಾನು?
ನಾನು ನೋಡಿದ್ದೆಲ್ಲ ಹಸು, ಕೊಟ್ಟಿಗೆ, ಗೋಮೂತ್ರ, ಸಗಣಿ. ಬರೀ ಇದನ್ನೇ.
ಆಗಲೂ ನೆಮ್ಮದಿ ಕೊಡ್ಲಿಲ್ಲ ನಂಗೆ. ಹಲವಾರು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನಗಳಾದ್ವು.
ನಿಂಗೆ ಪರಶುರಾಮರಿಂದ ವಿದ್ಯೆ ಕಲಿಯೋಕೆ ಅವಕಾಶವಾದ್ರೂ ಸಿಕ್ತು. ನಂಗೆ ಅಂಥ ಅವಕಾಶವೂ ಸಿಗಲಿಲ್ಲವಲ್ಲ. ದನಕಾಯ್ಕೊಂಡ್ ಇದ್ದೆ. ಹಾಗೂ ಸಿಕ್ಕಿದ್ದು ಬರೀ ಎಲ್ಲರಿಂದ ನಿಂದನೆ ದೂರು.
ನೀವೆಲ್ಲ ಆಗ್ಲೇ ವಿದ್ಯೆ ಕಲಿತು ಗಟ್ಟಿಯಾಗಿದ್ರಿ. ಅದೇ ನಾನು ಸಾಂದೀಪನಿ ಗುರುಗಳ ಬಳಿ ವಿದ್ಯೆಗಾಗಿ ಹೋದಾಗ ಆಗ್ಲೇಹದಿನಾರು ನಂಗೆ.
ನೀನು ನಿನ್ನಿಷ್ಟದ ಹುಡುಗೀನ ಮದ್ವೆ ಆದೆ. ನೀನು ಮಾತ್ರ ಅಲ್ಲ.. ಪಾಂಡವರು ಕೌರವರು ಎಲ್ಲರೂ. ನಾನು?
ನಾನು ಪ್ರಾಣದಂತೆ ಪ್ರೀತಿಸಿದ ಹುಡುಗಿಯನ್ನ ಮದ್ವೆ ಆಗೋಕೆ ಆಗ್ಲೇ ಇಲ್ಲ. ಇಷ್ಟವೋ ಇಷ್ಟವಿಲ್ಲವೋ ಯಾರ್ಯಾರನ್ನೋ ಮದುವೆ ಆಗಬೇಕಾಯ್ತು. ನೋಡುಗರ ಕಣ್ಣಿಗೆ ಮಾತ್ರ ಸುಖಪುರುಷ.
ಜರಾಸಂಧನಿಂದ ನನ್ನಿಡೀ ಕುಟುಂಬವನ್ನ ಉಳಿಸಿಕೊಳ್ಳೊ ಪರಿಸ್ಥಿತಿ ಬಂದಾಗ ಯಮುನೆ ತಟದಿಂದ ದೂರದ ಸಮುದ್ರತೀರಕ್ಕೆ ಎಲ್ಲರನ್ನೂ ಕರೆತಂದೆ. ನನಗೆ ಸಿಕ್ಕ ಸಮ್ಮಾನ ಏನು? ಹೇಡಿ ಎಂಬ ಮೂದಲಿಕೆ.
ಈಗ ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ ಗೆದ್ದರೆ ನಿಂಗೆ ಆ ಯಶಸ್ಸಿನ ಸಿಂಹಪಾಲು ಸಿಗುತ್ತೆ. ಜನ ನಿನ್ನನ್ನ ಕೊಂಡಾಡ್ತಾರೆ. ಅದೇ ಧರ್ಮರಾಯ ಗೆದ್ರೆ ಅದರ ಶ್ರೇಯ ನಂಗೆ ಸಿಗತ್ತಾ? ನಾನು ಯಕಶ್ಚಿತ್ ಅರ್ಜುನನ ಸಾರಥಿ ಆಗಿದ್ದೆ ಅಂತಷ್ಟೇ ಆಗೋದು. ಆದರೆ ಯುದ್ಧಕ್ಕೆ ಕಾರಣ ಸಾವುನೋವಿಗೆ ಕಾರಣ ನಾನು ಅನ್ನೋ ಮಾತುಗಳು ಬೇಕಾದ್ರೆ ನನ್ನ ಮೇಲೆ ಬರಬಹುದಷ್ಟೆ. ಕಪಟನಾಟಕ ಸೂತ್ರಧಾರಿ ಅಂತ ಕರೆದಾಗಿದೆ ಅಲ್ವಾ ಹೇಗೂ..!
ಹೇಳು ಈಗ. ನಿನ್ನ ಬದುಕು ನನ್ನ ಬದುಕಿಗಿಂತ ದಾರುಣವಾ?
ಒಂದು ಮಾತು ನೆನಪಿಟ್ಕೋ ಕರ್ಣ.. ಪ್ರತಿಯೊಬ್ಬರ ಜೀವನವೂ ಹೀಗೇನೆ. ಅವರದ್ದೇ ಆದ ಕಷ್ಟ ನೋವು ಅವಮಾನ ಸೋಲು ದುಃಖ ಸವಾಲು ಎಲ್ಲವೂ ಇರುತ್ತವೆ. ಇವೆಲ್ಲದರ ಸಂಕಲನವೇ ಬದುಕು.
ಯಾರ ಜೀವನವೂ ಸಲೀಸಾಗಿಲ್ಲ. ಎಲ್ಲರ ಬದುಕಿನ ಹಾದಿಯಲ್ಲೂ ಮುಳ್ಳುಗಳಿವೆ.
ಆದರೆ ಸರಿ ಯಾವುದು.. ಧರ್ಮ ಯಾವುದು ಅನ್ನೋದು ನಿನ್ನ ಆತ್ಮಸಾಕ್ಷಿಗೆ ಗೊತ್ತಿರುತ್ತೆ. ನಮಗೆಷ್ಟು ಅನ್ಯಾಯ ಆಗಿದೆ …ಎಷ್ಟು ಅವಮಾನವಾಗಿದೆ…ಎಷ್ಟು ಸಲ ಬಿದ್ದಿದ್ದೇವೆ.. ಅನ್ನೋದಕ್ಕಿಂತ.. ಇಂಥ ಸಮಯದಲ್ಲೆಲ್ಲ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ ಅನ್ನೋದು ಮುಖ್ಯವಾಗುತ್ತೆ.
ನಮ್ಮ ಬದುಕಿಗೆ ನ್ಯಾಯ ಸಿಕ್ಕಿಲ್ಲ ಅನ್ನೋದು ತಪ್ಪುದಾರಿಯಲ್ಲಿ ನಡೆಯೋಕೆ ರಹದಾರಿ ಆಗೋದಿಲ್ಲ. ಆಗಕೂಡದು.
ನಿಜ.. ಜೀವನ ಸುಲಭ ಅಲ್ಲ. ಹಲವು ಕಷ್ಟಗಳನ್ನು ಒಡ್ದುತ್ತದೆ ಜಗತ್ತು. ಆದರೆ ಗುರಿ ತಲುಪಿಸೋದು ನಾವು ಹಾಕಿದ ಪಾದರಕ್ಷೆಗಳಲ್ಲ.. ನಾವಿಡೋ ಹೆಜ್ಜೆಗಳು. ಆ ಹೆಜ್ಜೆಗಳು ಸರಿ ಇರಬೇಕು. ಹೆಜ್ಜೆ ಇಡುವ ಹಾದಿ ಸರಿ ಇರಬೇಕು.
ಸಂಗ್ರಹ