• 7 ಸೆಪ್ಟೆಂಬರ್ 2024

ಭಕ್ತಿಯ ವ್ಯಾಪಾರ..!ಆತ್ಮದ ಕಥೆ

 ಭಕ್ತಿಯ ವ್ಯಾಪಾರ..!ಆತ್ಮದ ಕಥೆ
Digiqole Ad

ಭಕ್ತಿಯ ವ್ಯಾಪಾರ..!ಆತ್ಮದ ಕಥೆ

ಎಂದಿನಂತ್ತೆ.. ಯಮಲೋಕದಲ್ಲಿ ಆತ್ಮಗಳನ್ನು ಕರೆದು ಅದರ ನಾಯ್ಯ ಅನ್ಯಾಯದ ಬಗ್ಗೆ ವಿಚಾರಣೆ ನಡೆಯುತ್ತಿತ್ತು.. ಸತ್ಯ ಧರ್ಮದಲ್ಲಿ ನಡೆದ ಆತ್ಮಗಳನ್ನು ಸ್ವರ್ಗಕ್ಕೆ ಕಳುಹಿಸಿ.. ಅನ್ಯಾಯ ಅಧರ್ಮ ಪಾಪದ ಕೆಲಸಗಳನ್ನು ಮಾಡಿದ ಆತ್ಮಗಳಿಗೆ.. ಸರಿಯಾದ ಶಿಕ್ಷೆಯನ್ನು ಕೊಟ್ಟು ನರಕಕ್ಕೆ ಕಳುಹಿಸಲಾಗುತಿತ್ತು …

ಯಮಧರ್ಮ ಸಿಂಹಾಸನದಲ್ಲಿ ಕುಳಿತು.. ಚಿತ್ರಗುಪ್ತ ನೀಡುವ ವಿವರಣೆಗಳನ್ನು ಆಲಿಸುತ್ತಾ ಅದಕ್ಕೆ ತಕ್ಕುದಾದ ತೀರ್ಪನ್ನು ನೀಡುತ್ತಿದ್ದ … ಒಂದೊಂದೇ ಆತ್ಮಗಳನ್ನು ಕರೆದು ವಿಚಾರಿಸುತಿರುವಾಗ.. ಒಂದು ಆತ್ಮವನ್ನು ಕಬ್ಬಿಣದ ಕೊಕ್ಕೆಗಳಿಗೆ ಸಿಕ್ಕಿಸಿ ಯಮನ ಭಟರು ನೇತಾಡಿಸಿಕೊಂಡು ಯಮನ ಎದುರು ತಂದು ನಿಂತರು … ಕಬ್ಬಿಣದ ಕೊಕ್ಕೆಗಳಲ್ಲಿ ಸಿಕ್ಕಿ ನೇತಾಡುತ್ತಿದ್ದರೂ .. ಆ ಆತ್ಮ ಮಾತ್ರ ಜೋರಾಗಿ ನಗುತ್ತಲೇ ಇತ್ತು… ಯಮರಾಜನಿಗೆ ಅದನ್ನು ನೋಡಿ.. ವಿಚಿತ್ರವಾಯಿತು.. ಚಿತ್ರಗುಪ್ತನಲ್ಲಿ ಆ ಆತ್ಮದ ಬಗ್ಗೆ ಕೇಳತೊಡಗಿದ.. ಚಿತ್ರಗುಪ್ತರೇ… ಈ ಆತ್ಮವೇಕೆ ಗಹಗಹಿಸಿ ನಗುತಿರುವ..? ಕಬ್ಬಿಣದ ಸಲಾಕೆಯಲ್ಲಿ ನೇತಾಡುತ್ತಿದ್ದರು.. ಯಾಕೆ ಈತ ನಗುತಿರುವ..? ಈತ ಭೂಲೋಕದಲ್ಲಿ ಯಾವ ಕೆಲಸವನ್ನು ಎಸಗಿ ಇಲ್ಲಿಗೆ ಬಂದಿರುನೆಂದು ತಿಳಿಸುವಿರಾ.. ? ಎಂದಾಂಗ.. ಚಿತ್ರಗುಪ್ತ.. ಯಮ ಮಹಾಪ್ರಭುಳೇ… ಈತನು ಭೂಲೋಕದಲ್ಲಿ ಏನೆಲ್ಲ ಮಾಡಿರುವನು ಎಂಬುದರ ಕತೆಯನ್ನು ನಿಮಗೆ ತಿಳಿಸುವೆ.. ಕೇಳಿ.. ಸ್ವಾಮಿ .. ಎಂದು.

ಆ ಆತ್ಮದ ಕತೆಯನ್ನ ಹೇಳಲು ಆರಂಭಿಸಿದ…

ಒಂದು ಊರಿನಲ್ಲಿ ಒಂದು ಪಾಳುಬಿದ್ದ ದೇವಾಲಯವೊಂದಿತ್ತು.. ದಟ್ಟ ಕಾಡು ಪೊದೆ ತುಂಬಿ. ಆ ದೇವಾಲಯದ ಹತ್ತಿರ ಯಾರು ಹೋಗುತ್ತಿರಲಿಲ್ಲ..ಹೀಗೆ ಇರುವಾಗ ಒಂದು ದಿವಸ ಅದೇ ಊರಿನ ಐದು ಮಂದಿ ಯುವಕರು ಸೇರಿ ಆ ಪಾಳು ಬಿದ್ದ ದೇವಾಲಯದ ಕಾಡು ಪೊದೆಗಳನ್ನು ಕಡಿದು ಸ್ವಚ್ಛ ಮಾಡಿ.. ದೇವಾಲಯದ ಒಳ ಭಾಗವನ್ನು ತೊಳೆದು ಸ್ವಚ್ಛ ಮಾಡಿದರು.. ಅಂದೇ ಸಂಜೆ ಹೊತ್ತಿಗೆ ಐವರು ಗೆಳೆಯರು ಸೇರಿ ದೇವಾಲಯದ ಎದುರು ಭಾಗದಲ್ಲಿ ಕುಳಿತು ಭಜನೆಗಳನ್ನು ಹಾಡತೊಡಗಿದರು..‌ ಇವರ ಭಜನೆಯನ್ನು ಕೇಳಿ ಅಕ್ಕ ಪಕ್ಕದವರೆಲ್ಲ. ದೇವಾಲಯದತ್ತ ಬಂದು ಸೇರಿದರು… ಬಂದವರೆಲ್ಲ ದೇವಾಲಯಕ್ಕೆ ಕೈ ಮುಗಿದು.. ಈ ಯುವಕರ ಜೊತೆ ಸೇರಿ ಭಜನೆಯನ್ನು ಹಾಡತೊಗಿದರು…ಹೀಗೆ.. ಪಾಳುಬಿದ್ದ ದೇವಾಸ್ಥಾನವೀಗ.. ಭಕ್ತ ಜನ ಸಾಗರ ಬರುವಂತ್ತೆ ಆಯಿತು.. ತಂಡ ತಂಡವಾಗಿ ಭಜನೆ ಹೇಳುವವರು ಹರಿಕಥೆ ಪ್ರವಚನ ಮಾಡುವವರು ಎಲ್ಲರು ಬಂದು ತಮ್ಮ ಭಕ್ತಿಯಿಂದ ಸೇವೆಗಳನ್ನು ಮಾಡಿ ಹೋಗುತಿದ್ದರು..

ಅದೇ ಊರಿನ ಶಂಭಯ್ಯನೆಂಬ ವ್ಯಾಪಾರಿಯೊಬ್ಬ ಪಕ್ಕದ ಊರಿಗೆ ವ್ಯಾಪಾರ ಮಾಡಲು. ಈ ದೇವಾಲಯದ ಎದುರಿನ ರಸ್ತೆಯಲ್ಲಿ ಹೋಗಿ ಬರುತಿದ್ದ.. ಅವ ಯಾವಾಗ ನೋಡಿದರೂ ಈ ದೇವಸ್ಥಾನದಲ್ಲಿ ಜನ ತುಂಬಿರುವುದನ್ನು ನೋಡಿ.. ಎಲಾ..! ನಾನು ಹಲವಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ಹೋಗಿ ಬರುವಾಗಲು ಈ ಪಾಳುಬಿದ್ದ ದೇವಸ್ಥಾನವನ್ನು ನೋಡಿದ್ದೇನೆ.. ಆಗ ಕಾಡು ಪೊದೆ ತುಂಬಿದ ಜಾಗ ಈಗ. ಜನರಿಂದ ತುಂಬಿದೆ.. ಇಲ್ಲಿ ಏನೋ.. ವಿಶೇಷ ಇರಬೇಕು.. ಹೋಗಿ ವಿಚಾರಿಸುವ ಎಂದು ತನ್ನ ಕುದುರೆಯನ್ನು ಅಲ್ಲೆ ಇದ್ದ ಮರಕ್ಕೆ ಕಟ್ಟಿ. ದೇವಸ್ಥಾನದ ಕಡೆ ನಡೆದ..

ಶಂಭಯ್ಯನು. ಅಲ್ಲಿದ್ದ ಒಬ್ಬನನ್ನು ಕರೆದು. ಆ ಜಾಗದ ವಿಷಯವನ್ನು ಕೇಳಿದನು.. ಆಗ ಆ ವ್ಯಕ್ತಿ.. ನೋಡಿ ಸ್ವಾಮಿ.. ಈ ದೇವಸ್ಥಾನ ನಮ್ಮ ಹಿರಿಯ ಕಾಲದಿಂದಲೂ ಪಾಳು ಬಿದ್ದಿತ್ತು.. ಅದನ್ನು ನಮ್ಮೂರ ಐದು ಮಂದಿ ಯುವಕರು ಸೇರಿ ಸ್ವಚ್ಛ ಮಾಡಿ ‌. ಇಲ್ಲಿ ದಿನ ನಿತ್ಯ ಸಂಜೆಗೆ ಭಜನೆಯನ್ನು ಮಾಡಲಾರಂಭಿಸಿದರು.. ಈಗ ಊರ ಪರವೂರಿಂದಲೂ ಜನ ಇಲ್ಲಿಗೆ ಬರ್ತಾರೆ.. ಕೆಲವರು ಬಂದು ಭಜನೆ ಹರಿಕಥೆಯನ್ನು ಮಾಡಿ ಹೋಗ್ತಾರೆ.. ಎಂದು ಹೇಳತೊಡಗಿದ.. ಆಗ ಶಂಭಯ್ಯ.. ಹಾಗದ್ರೆ ಈ ದೇವಸ್ಥನಕ್ಕೆ ಯಾರೂ ಗುರಿಕಾರ ಅಥವ ಮೊಕ್ತೇಸರರು ಇಲ್ಲವೇ..? ಎಂದಾಗ. ಇಲ್ಲ ಸ್ವಾಮಿ ಇಲ್ಲಿ ಯಾರೂ ಅಂತವರು ಇಲ್ಲ.. ಎಲ್ಲರೂ ಬರ್ತಾರೆ ಅವರವರ ಭಕ್ತಿ ಭಾವಕ್ಕೆ ತಕ್ಕಂತೆ ಪೂಜೆ ಭಜನೆಗಳನ್ನು ಮಾಡಿ ಹೋಗ್ತಾರೆ ಎಂದು ಹೇಳಿದ..

ಶಂಭಯ್ಯ… ಆ ವ್ಯಕ್ತಿಯ ಮಾತು ಕೇಳಿ. ಒಹೋ..! ಈ ದೇವಾಲಯಕ್ಕೆ ಆಡಳಿತ ವರ್ಗವಿಲ್ಲವೇ..? ವಾರಿಸುದಾರರು ಯಾರೂ ಇಲ್ಲದೆ ಹೀಗೆ ಇದೆ ಅಲ್ವಾ.. ಎಂದು ಹೇಳುತ್ತಾ.. ಅಲ್ಲೇ ಇದ್ದ ಮಣ್ಣಿನ ಕಟ್ಟೆಯ ಮೇಲೆ ನಿಂತ್ತು.. ಅಲ್ಲಿ ನೆರೆದಿದ್ದ ಭಕ್ತರು ತನ್ನ ಕಡೆಗೆ ನೋಡುವಂತೆ ಜೋರಾಗಿ ಕರೆಯುವನು… ಆಗ ಎಲ್ಲರೂ ಶಂಭಯ್ಯನತ್ತ ನಿಂತ್ತು ನೋಡುವರು.. ಶಂಭಯ್ಯನು. ಅಲ್ಲಿದ್ದವರನ್ನು ಉದ್ದೇಶಿಸಿ ಮಾತು ಆರಂಭಿಸಿದ… ಇಲ್ಲಿ ಸೇರಿರುವಂತಹ.. ನನ್ನ ಸಹೋದರ ಸಹೋದರಿಯರೇ.. ನನ್ನ ಬಗ್ಗೆ ನಿಮಗೆ ಪರಿಚಯವಿಲ್ಲದಿರ ಬಹುದು .. ನಾನು ಬೇರೆ ಗ್ರಾಮದವನೇನಲ್ಲ.. ಇದೇ ಗ್ರಾಮದವನು.. ಈ ದೇವಸ್ಥಾನದ ಎದುರಿನ ರಸ್ತೆಯಲ್ಲಿ ದಿನನಿತ್ಯ ಸಂಚಾರ ಮಾಡುತಿದ್ದವನು… ನನ್ನ ಹೆಸರು ಶಂಭಯ್ಯನೆಂದು..

ಈ ಪಾಳುಬಿದ್ದ ದೇವಸ್ಥಾನಕ್ಕೆ ಭಕ್ತರು ಮರಳಿ ಬರುವಂತೆ ಮಾಡಿದ. ಆ ಐವರು ಯುವಕರ ಕಾಯಕವನ್ನು ನಾನು ಮೆಚ್ಚಿ ಅವರನ್ನು ನಾನು ಸನ್ಮಾನಿಸಿ ಗೌರವಿಸುತ್ತೇನೆ.. ಇಂತಹ ಯುವಕರು ಇನ್ನೂ ಹೆಚ್ಚು ಇಂತಹ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.. ಆಗಲೇ ಪರಮಾತ್ಮನ ಕೃಪಾಕಟಾಕ್ಷ ದೊರೆಯುವುದು.. ಎಂದು. ಆ ಐದು ಯುವಕರನ್ನು ತನ್ನತ್ತ ಕರೆಯುವನು .. ಅವರನ್ನು ಆಲಂಗಿಸಿ.. ನಾಳೆ ದಿನ ಇದೇ ಜಾಗದಲ್ಲಿ ಇವರನ್ನು . ಅತೀ ವಿಜೃಂಭಣೆಯಿಂದ ಸನ್ಮಾನಿಸುವ ಯೋಜನೆಯನ್ನು. ನಾನು ನನ್ನ ಸ್ವಂತ ಖರ್ಚಿನಿಂದ ನಡೆಸುವ ತೀರ್ಮಾನ ಮಾಡಿದ್ದೇನೆ… ತಾವೆಲ್ಲರೂ. ಇನ್ನೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ.. ಈ ಶಂಭಯ್ಯನ ವಿನಂತಿ. ಎಂದು ಹೇಳಿದಾಗ.. ಸೇರಿದವರೆಲ್ಲ ಚಪ್ಪಾಳೆ ತಟ್ಟಿ ಪ್ರೋತ್ಸಾಹವನ್ನು ಸೂಚಿಸುವರು…

ಮರುದಿನ ಸಂಜೆ ಶಂಭಯ್ಯನ ವೇದಿಕೆ ತಯಾರು ಆಯ್ತು… ವೇದಿಕೆಯ ಎದುರು ಭಾಗದಲ್ಲಿ ಜನ ಕುಳಿತು ಕೊಂಡಿದ್ದಾರೆ… ಸನ್ಮಾನ ಕಾರ್ಯಕ್ರಮ ಶುರುವಾಯಿತು.. ಐವರಿಗೂ. ಶಾಲು ಹೊದಿಸಿ ಉಡುಗೊರೆ ನೀಡಿ ಸನ್ಮಾನಿಸಿದ ಶಂಭಯ್ಯ .. ಮಾತು ಆರಂಭಿಸಿದ… ಇಲ್ಲಿ ಸೇರಿರುವ ಹಿರಿ ಕಿರಿಯರೇ.. ನಾನು ಅಂದು ಕೊಂಡ ಕಾರ್ಯ ಮಾಡಿ ಮುಗಿಸಿದ್ದೇನೆ.. ಹಾಗೆಯೆ.. ಇನ್ನೊಂದು ವಿಚಾರ ನಿಮ್ಮಲ್ಲಿ ಹೇಳಬಯಸುತ್ತೇನೆ… ಅದೇನೆಂದರೆ.. ನಾನೊಬ್ಬ ವೃತ್ತಿಯಲ್ಲಿ ವ್ಯಾಪಾರಿ .. ದೇವರು ನನಿಗೆ ಬೇಕಾದಷ್ಟು ಸಂಪತ್ತು ನೀಡಿದ್ದಾನೆ.. ತಿಂದು ಕರಗದಸ್ಟು ಆಸ್ತಿಯಿದೆ.. ಹಾಗಾಗಿ ನಿಮ್ಮೆಲ್ಲರ ಒಪ್ಪಿಗೆ ಇದ್ದರೆ.. ಈ ದೇವಾಲಯದ ದುರಸ್ತಿ ಮಾಡಿಸಿ. ಪ್ರತಿಷ್ಠಾ ಕಾರ್ಯವನ್ನು. ನನ್ನದೇ ಸ್ವಂತ ಖರ್ಚಿನಲ್ಲಿ ಮಾಡಬೇಕೆಂಬ ಮನದಾಸೆಯಾಗಿದೆ .. ನೀವೆಲ್ಲರೂ ಒಪ್ಪಿದರೆ ಮಾತ್ರ ಈ ಕೆಲಸ ಸಾಧ್ಯ ಎಂದನು ಶಂಭಯ್ಯ.. ಅಲ್ಲಿ ಸೇರಿದವರು. ತಾವು ತಾವೆ ಮಾತಾಡಿಕೊಂಡು.. ಒಂದು ನಿರ್ಧಾರಕ್ಕೆ ಬಂದರು… ಶಂಭಯ್ಯ ಅಲ್ಲಿದ್ದವರಲ್ಲಿ.. ನಾನು ಮಾಡುವ ಕೆಲಸಕ್ಕೆ ಯಾರೆಲ್ಲ ಬೆಂಬಲ ಸೂಚಿಸುವವರಿದ್ದೀರಿ ಕೈ ಮೇಲೆತ್ತಿ ಎಂದಾಗ.. ಎಲ್ಲರೂ ಕೈ ಮೇಲೆತ್ತಿ ಬೆಂಬಲ ಸೂಚಿಸಿದರು…

ಶಂಭಯ್ಯ ಎಲ್ಲರಿಗೂ ಕೈ ಮುಗಿದು ವಂದಿಸಿ.. ನಾಳೆಯಿಂದಲೇ ನಾನು ಈ ಪುಣ್ಯ ಕೆಲಸಕ್ಕೆ ಪ್ರಾರಂಭಿಸುತ್ತೇನೆ.. ತಾವೆಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿ..ತನ್ನ ಮನೆಯ ಕಡೆಗೆ ಹೋರಟನು… ಊರಿನವರು ಎಲ್ಲರು ಶಂಭಯ್ಯನನ್ನು ಮೆಚ್ಚಿಕೊಂಡರು.. ಶಂಭಯ್ಯ ತನ್ನದೇ ಪುರೋಹಿತರನ್ನು ಅಲ್ಲಿಗೆ ನೇಮಿಸಿದ.. ಮಾತಲ್ಲೇ ಮರುಳು ಮಾಡುತ್ತಾ. ಜನರ ಹಣದಿಂದಲೇ ಪ್ರತಿಷ್ಠಾ ಕಾರ್ಯವನ್ನು ಮಾಡಿಮುಗಿಸಿ.. ತನ್ನದೇ ಹಣದಿಂದ ಮಾಡಿದ್ದು ಎಂಬ ಹಾಗೆ ಜನರನ್ನು ನಂಬಿಸಿದ..

ಕೆಲವೇ ದಿನಗಳಲ್ಲಿ ಆ ದೇವಸ್ಥಾನದ ವಾರಿಸುದಾರನಾಗಿ.. ಎಲ್ಲಾ ಕೆಲಸಗಳಿಗೆ ತನ್ನದೇ ಜನಗಳನ್ನು ನೇಮಕಗೊಳಿಸಿದ.. ಭಕ್ತರು ನೀಡಿದ ಹರಕೆಯ ಬೆಳ್ಳಿ ಬಂಗಾರವನ್ನು ತನ್ನ ಮನೆಯಟ್ಟು ಅಂತದೇ ನಕಲಿ ಆಭರಣಗಳನ್ನು ದೇವಸ್ಥಾನದಲ್ಲಿ ತಂದಿಟ್ಟ… ಶಂಭಯ್ಯ ಇಂತಹ ಕೃತ್ಯ ಮಾಡುತಿದ್ದದು. ಊರವರಿಗೆ ಗೊತ್ತೇ ಆಗುತ್ತಿರಲಿಲ್ಲ.. ಯಾಕಂದ್ರೆ ಶಂಭಯ್ಯನ ಮೇಲಿನ ನಂಬಿಕೆ.. ಶಂಭಯ್ಯ ಹಾಗೆ ಮಾಡಲಾರ.. ಅವನಲ್ಲಿ ಬೇಕಾದಷ್ಟು ಆಸ್ತಿ ಸಂಪತು ಇದೆ ಎಂಬ ನಂಬಿಕೆ ಜನರಲ್ಲಿತ್ತು…

ಈ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡ ಶಂಭಯ್ಯ ದಿನೇ ದಿನ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಮನೆಗೆ ಕೊಂಡೊಯ್ದು ಹೆಂಡತಿ ಮಕ್ಕಳಿಗೆ ಚಿನ್ನಾಭರಣ ಮಾಡಿಸಿ ಹಾಕುತಿದ್ದ..

ಈಗ ಎಲ್ಲಾ ಸೇವೆಗಳಿಗೆ ರಶೀದಿಯನ್ನು ಮಾಡಿ.. ಅದರಿಂದಲೂ ಲಾಭ ಮಾಡತೊಡಗಿದ.. ಹಿಂದೆ ಜನ ಎಲ್ಲೆಂದರಲ್ಲಿ ಕುಳಿತು ಭಜನೆ ಮಾಡುತಿದ್ದರು.. ಈಗ ಅವರಿಗೂ ರಶೀದಿ ಪಡೆಯದೆ ಭಜನೆ ಹಾಡಲು ಅವಕಾಶವಿಲ್ಲ.. ಎಲ್ಲದಕ್ಕೂ ಶುಲ್ಕ ವಿಧಿಸುಸುತ್ತಾ.. ತನ್ನ ಕರಾಳ ಮುಖ ಯಾರಿಗೂ ಕಾಣದಂತೆ ಕಾರ್ಯ ನಿರ್ವಹಿಸುತ್ತಾ ಕಾಲ ಕಳೆಯತೊಡಗಿದ… ದಿನ ಕಳೆದು ವರ್ಷಗಳೇ ಕಳೆದಿವೆ..‌ ದೇವರ ಆರಾಧನಕ್ಕೆ ಧನವೇ ಮುಖ್ಯವೆಂಬತ್ತೆ ಆಗಿ ಹೋಯಿತು.. ಆಗ ಭಕ್ತರು ಬರುವುದನ್ನು ಕ್ರಮೇಣ ನಿಲ್ಲಿವರೆಗೂ ಶಂಭಯ್ಯನ ಕಾರ್ಯ ಮುಟ್ಟಿತು.. ಶಂಭಯ್ಯನಿಗೂ ವಯಸ್ಸಾಗಿ ಮುದುಕನಾದ.. ಜನ ತುಂಬಿ ತುಳುಕುತಿದ್ದ ದೇವಾಲಯದ ಸುತ್ತ ಮುತ್ತ ಗಿಡ ಗಂಟಿಗಳು ಬೆಳೆಯಲಾಂಬಿಸಿದವು.. ಆಲಯದಲ್ಲಿ ಪೊದೆಗಳು ತುಂಬಿ ಹಿಂದೆ ಹೇಗೆ ಪಾಳು ಬಿದ್ದಿತ್ತೊ ಅದೇ ರೀತಿಯಲ್ಲಿ ಇರುವಂತ್ತೆ ಆಯಿತು..

ಹೀಗೆ ಒಂದು ದಿವಸ ಶಂಭಯ್ಯನು ಸತ್ತ…

ಹೀಗೆ ಶಂಭಯ್ಯನ ಆತ್ಮವನ್ನು ಕಬ್ಬಿಣದ ಸಲಾಕೆಯಲ್ಲಿ ತೂಗಿಸಿ ಅವನ ಕತೆಯನ್ನು ಚಿತ್ರಗುಪ್ತ ಹೇಳಿ ಮುಗಿಸಿದ..

ಅದನ್ನು ಕೇಳಿ ಯಮನ ಕೋಪ ನೂರು ಪಟ್ಟು ಹೆಚ್ಚಾಯಿತು… ಈ ಅಧರ್ಮನನ್ನು ಕೆಂಡಕ್ಕೆ ಹಾಕಿ ಸುಟ್ಟು ಹಾಕಿ.. ಎಂದು ಕೋಪದಿಂದ ಅಬ್ಬರಿಸಿದಾಗಲು ಶಂಭಯ್ಯ ನಗುತ್ತಲೇ ಇದ್ದ…

ಶಂಭಯ್ಯ ಸನಿಹಕ್ಕೆ ಬಂದ ಯಮ ಕೋಪದಿಂದ.. ಎಲವೋ.. ದುರಾತ್ಮ.. ನೀಚ ವಂಚಕನೆ.. ನೀನು ಮಾಡಿದ ಪಾಪ ಕಾರ್ಯಕ್ಕೆ ತಕ್ಕದಾದ ಶಿಕ್ಷೆಯನ್ನು ನಿನಗೆ ನೀಡುತಿದ್ದರೂ ನೀನು ನಗುತಿರುವೆಯಲ್ಲಾ…? ಎಂದಾಗ

ಶಂಭಯ್ಯ ನಗುವನ್ನು ನಿಲ್ಲಿಸಿ ಹೇಳುತ್ತಾನೆ.. ಸ್ವಾಮಿ ಮಹಾ ಪ್ರಭೂ.. ನಾನು ಭೂಲೋಕದಲ್ಲಿ ಅದೂ ಮಾನವನಾಗಿ. ಎಲ್ಲಾ ತರಹದ ತಪ್ಪುಗಳನ್ನು ಮಾಡಿದ್ದೇನೆ.. ಒಂದು ತಪ್ಪಿನಿಂದ ಮತ್ತೊಂದು ತಪ್ಪು ಮುಂದುವರಿಸಲು ಕಾರಣ ಅಲ್ಲಿ ಸರಿಯಾದ ಶಿಕ್ಷೆ ನೀಡದೆ ಇರುವುದು‌.‌. ಎಂದಾಗ..

ಯಮ ಹೇಳುವನು.. ಅದು ನಿನ್ನ ಪಾಪದ ಕೊಡ ತುಂಬದ ಕಾರಣ ಶಿಕ್ಷೆಯಾಗಲಿಲ್ಲ.. ಕೊನೆಗೇ ಇಲ್ಲಿಯ ಶಿಕ್ಷೆ ಇದೆಯಲ್ಲ ಎಂದು ಯಮ ನುಡಿದಾಗ…

ಸ್ವಾಮೀ.. ಯಮ ಧರ್ಮ.. ಇಲ್ಲಿಯ ಶಿಕ್ಷೆ ಬರೇ ಆತ್ಮಕ್ಕೆ ಮಾತ್ರ… ಅಲ್ಲಿ ನನ್ನ ದೇಹದಿಂದ ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕಿತ್ತು… ನಾನು ದೇವರ ಆಭರಣ ಕದ್ದಾಗ ಅಲ್ಲಿ ನನ್ನ ಕೈ ಕಡಿಯುತಿದ್ದರೆ ನಾನು ಕೈ ಕಳೆದು ಕೊಂಡ ನೋವಿನಿಂದ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು .. ಕಳ್ಳತನವನ್ನು ಬಿಟ್ಟು ಬಿಡುತಿದ್ದೆ… ನಾನು ಮಾತಿನಲ್ಲಿ ದ್ರೋಹ ಮಾಡಿದಾಗ ನನ್ನ ನಾಲಿಗೆಯನ್ನು ಸೀಳುತಿದ್ದರೆ.. ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುತಿರಲಿಲ್ಲ… ಎಷ್ಟೋ ಅಮಾಯಕರನ್ನು ಕಾಲಿನಿಂದ ತುಳಿದಿದ್ದೇನೆ.. ಆಗ ನನ್ನ ಕಾಲನ್ನು ಕತ್ತರಿಸಿ ಬಿಸಾಕುತಿದ್ದರೆ.. ಮತ್ತೆಂದು ಅಂಥಹ ತಪ್ಪನ್ನೂ ಮಾಡಲೂ ಯೋಚಿಸುತಿರಲಿಲ್ಲ… ಭಕ್ತಿಯ ಸಾನಿಧ್ಯವನ್ನು ವ್ಯಾಪಾರಿ ಕೇಂದ್ರದತ್ತೆ ಮಾಡಿ ನಾನು ಭಕ್ತಿಯ ವ್ಯಾಪರ ಮಾಡತೊಡಗಿದೆ.. ಹಣ ಆಸ್ತಿ ಒಡವೇ ನನ್ನ ಜೀವನದಲ್ಲಿ ಮುಖ್ಯವಾಯಿತು ಹೊರತು.. ದೇವನಂಬಿಕೆಯೆಂಬುದು ನನ್ನ ಮನಸ್ಸಿನಲ್ಲೂ ಬರಲೇ ಇಲ್ಲ…

ನನ್ನ ಮಾನವ ಜೀವಿತಾವಧಿಯಲ್ಲಿ ಎಲ್ಲಾ ಸುಖ ಭೋಗ ಭಾಗ್ಯಗಳನ್ನು ಜನರಿಗೆ ವಂಚಿಸಿ ಅನುಭವಿಸಿ ಆಗಿದೆ.. ಆ ಎಲ್ಲಾ ತಪ್ಪುಗಳಿಗೆ ಸರಿಯಾದ ಶಿಕ್ಷೆ ನಾನು ಶರೀರದಲ್ಲಿ ಇರುವಾಗಲೇ ಕೊಡಬೇಕಿತ್ತು.. ಈಗ ಶರೀರ ಬಿಟ್ಟಾಗಿದೆ.. ಆತ್ಮ ಮಾತ್ರ ಈ ಆತ್ಮಕ್ಕೆ ಶಿಕ್ಷೆ ಕೊಟ್ಟರೆ.. ಅಂದಿನ ದಿನದ ತಪ್ಪುಗಳಿಗೆ ಸರಿ ಹೊಂದುವುದೇ..? ‌ ಎಂದಾಗ.. ಯಮನಿಗೂ ಶಂಭಯ್ಯನ ಆತ್ಮದ ಮಾತಿನಲ್ಲು ನಿಜವಿದೆ ಎಂದನಿಸಿತು… ಮಾನವ ಜನ್ಮದಲ್ಲಿ ಇರುವಾಗಲೆ ತಪ್ಪು ಮಾಡಿದವಗೆ ಶಿಕ್ಷೆ ನೀಡುವಂತೆ ಇರಬೇಕಿತ್ತು.. ಅವ ಮತ್ತೆಂದಿಗೂ ಅಪರಾಧವನ್ನು ಎಸಗಬಾರದು ಅಂತಾ ಶಿಕ್ಷೆ ಕೊಟ್ಟು ಜೀವನ ಪರ್ಯಂತ ನರಳಿ ನರಳಿ … ಅಲ್ಲಿ ಮಾಡಿದ ಪಾಪ ಕರ್ಮದ ಫಲವನ್ನು ಅಲ್ಲೇ ಅನುಭವಿಸಬೇಕು..

ಆಗಲೇ ಮಾನವನಿಗೆ ಬುದ್ದಿ ಬರೊದು… ಎಂದು ಯೋಚಿಸುತ್ತಾ.. ಹ್ಹುಂ.. ಇವನನ್ನು ಕೊಂಡೊಯ್ದು ಆ ನಿಗಿ ನಿಗಿ ಕೆಂಡದಲ್ಲಿ ಸುಟ್ಟು ಬೂದಿ ಮಾಡಿ ಬಿಡಿ ಎಂದು ಆಜ್ಞೆಯಿತ್ತು..

ಮುಂದಿನ ಆತ್ಮದ ವಿಚಾರಣೆಗೆ ಮುಂದಾದನು… ಆಗ ಯಮ ಭಟರು ಶಂಭಯ್ಯನ ಆತ್ಮವನ್ನು ಕೆಂಡದ ರಾಶಿಯತ್ತ ಕೊಂಡೊಯ್ಯುವಾಗ.. ಶಂಭಯ್ಯನ ಆತ್ಮ ಹೇಳ ತೋಡಗಿತು… ನನ್ನ ಜೀವನದ ಕತೆಯಲ್ಲಿ ಯಾರೆಲ್ಲ ತಪ್ಪು ಮಾಡಿದ್ದಾರೆ.. ಯಾರಿಂದ ತಪ್ಪು ಆಗಿದೆ ಎಂಬುದನ್ನು ಭೂಲೋಕದ ಜನರು ವಿಮರ್ಶೆ ಮಾಡುತ್ತಿರಬಹುದು..ಅಲ್ಲವೇ.. ಭಟರೇ ? ಅಂದಾಗ.. ಅಲ್ಲಿಯ ತೀರ್ಪು ಅಲ್ಲಿಗೆ.. ಇಲ್ಲಿಯ ತೀರ್ಪು ಇಲ್ಲಿಗೆ ಎಂದು ಯಮಭಟರು ಉರಿಯುವ ಕೆಂಡಕ್ಕೆ ಆತ್ಮವನ್ನು ಎಸೆದುಬಿಡುತ್ತಾರೆ….

AUTHOR: M RAMA ISHWARAMANGALA 

WWW.GOLDFACTORYNEWS.COM©

ಈ ಕತೆಯನ್ನು ಓದಿದವರು ” ತಪ್ಪು ಹಾಗು ಶಿಕ್ಷೆ ” ಇದರ ಬಗ್ಗೆ

ತಮ್ಮ ಅನಿಸಿಕೆಗಳ ಮೂಲಕ ತಿಳಿಸಿ…

ವಂದನೆಗಳು..🙏🙏

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ