ಭಾರತ-ಕೆನಡಾ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಹೆಚ್ಚಳ: ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ
ಭಾರತ-ಕೆನಡಾ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಹೆಚ್ಚಳ: ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ
ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದಾರೆ. ಇದು ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಈಗ ಭಾರತವು ಕೆನಡಾ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಭಾರತದ ವೀಸಾ ಸೇವೆಯು ಕೆನಡಾ ಪ್ರಜೆಗಳಿಗೆ ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೆನಡಾ ಪ್ರಜೆಗಳ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆ ನಡೆಸುವ ಖಾಸಗಿ ಏಜೆನ್ಸಿ ‘ಬಿಎಲ್‌ಎಸ್ ಇಂಟರ್‌ನ್ಯಾಷನಲ್’ ತನ್ನ ವೆಬ್‌ಸೈಟ್‌ನಲ್ಲಿ ಭಾರತೀಯ ವೀಸಾ ಸೇವೆಯನ್ನು ‘ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಕೆನಡಾದಲ್ಲಿನ ಭಾರತದ ರಾಜತಾಂತ್ರಿಕರು ಹಾಗೂ ಪ್ರಜೆಗಳ ಸುರಕ್ಷತೆಯನ್ನು ಕಾಪಾಡುವುದಾಗಿ ಅಲ್ಲಿನ ಸರ್ಕಾರ ಹೇಳಿದ್ದರೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಿದೆ. ಬಿಎಲ್ ಎಸ್ ಇಂಟರ್‌ನ್ಯಾಶನಲ್ ಎಂಬ ಕೆನಡಿಯನ್ನರ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿ ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21, 2023 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ. ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದರು. ಇದರಿಂದಾಗಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿದ್ದು, ಈ ನಡುವೆಯೇ ವೀಸಾ ಸ್ಥಗಿತ ಕ್ರಮ ಕೈಗೊಳ್ಳಲಾಗಿದೆ.
ಭಾರತ-ವಿರೋಧಿ ಚಟುವಟಿಕೆಗಳು ಹಾಗೂ ರಾಜಕೀಯವಾಗಿ ಮನ್ನಣೆ ಪಡೆದ ದ್ವೇಷದ ಅಪರಾಧಗಳು ಕೆನಡಾದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆನಡಾದಲ್ಲಿರುವ ಭಾರತದ ನಾಗರಿಕರನ್ನು ಅತ್ಯಂತ ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಎಚ್ಚರಿಕೆ ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ.