ಜ.24-28: ಮಂಗಳೂರಿನಲ್ಲಿ ‘ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-2’
ಜ.24-28: ಮಂಗಳೂರಿನಲ್ಲಿ ‘ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-2’
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ಮಾರ್ಗದರ್ಶನದಲ್ಲಿ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-2 ಇದೇ 2024ರ ಜನವರಿ 24 ರಿಂದ 28ರ ವರೆಗೆ ಐದು ದಿನಗಳ ಕಾಲ ನಡೆಯಲಿದ್ದು ಜನವರಿ 24ರ ಸಂಜೆ 7 ಗಂಟೆಗೆ ಸೀಸನ್-2ಗೆ ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ವರ್ಷದ ಮಂಗಳೂರಿನ “ಸ್ಟ್ರೀಟ್ ಫುಡ್ ಫಿಯೆಸ್ಟ” ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾಗಿತ್ತು. ಆ ಯಶಸ್ಸೇ ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್ -2 ಗೆ ಪ್ರೇರಣೆಯಾಗಿದ್ದು ಈಗಾಗಲೇ ಸಾರ್ವಜನಿಕ ವಲಯದಿಂದ ಅತ್ಯುತ್ತಮ ಸ್ಪಂದನೆ ಹಾಗೂ ನಿರೀಕ್ಷೆ ಲಭಿಸಿದೆ. “ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ” ದವರೆಗೆ ಪ್ರತಿ ನಿತ್ಯ ಸಂಜೆ 4ರಿಂದ ರಾತ್ರಿ 10.30 ರವರೆಗೆ (ಕೊನೆಯ ಮೂರು ದಿನ, ಶುಕ್ರವಾರ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10.30 ತನಕ) ಸ್ಟ್ರೀಟ್ ಫುಡ್ ಫಿಯೆಸ್ಟಾ ನಡೆಯಲಿರುವ ಸ್ಥಳಗಳಲ್ಲಿ ಮಳಿಗೆ ನಿರ್ಮಾಣ ಸಹಿತ ಎಲ್ಲಾ ತಯಾರಿಗಳು ಬಹುತೇಕ ಪೂರ್ಣಗೊಂಡಿದ್ದು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್ -2 ನಲ್ಲಿ ಭಾಗವಹಿಸಲು ಆನ್ಲೈನ್ ನಲ್ಲಿ ನೋಂದಣಿಯಾಗಿದ್ದ ಹೆಚ್ಚಿನ ಸಂಖ್ಯೆಯ ಮಳಿಗೆಗಳಿಂದ 160 ಸಂಖ್ಯೆಯ ವಿಶೇಷ ಆಹಾರ ಮಳಿಗೆಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯ-ದೇಶದ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಉತ್ಸವ:- ಸ್ಟ್ರೀಟ್ ಫುಡ್ ಫಿಯೆಸ್ಟಾ ಸೀಸನ್-2 ನಲ್ಲಿ ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ.
ಈ ಬಾರಿ ಫುಡ್ ಫಿಯೆಸ್ಟಾದಲ್ಲಿ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರು ಹಾಗೂ ಮಳಿಗೆದಾರರ ನಡುವೆ ನಗದು ಅಥವಾ ಕ್ಯಾಶ್ ರೂಪದ ವ್ಯವಹಾರಕ್ಕಿಂತ ಎಲ್ಲಾ ಮಳಿಗೆದಾರರಿಗೂ ನೀಡಲಾಗಿರುವ ಪ್ರತ್ಯೇಕ ಕ್ಯೂಆರ್ ಕೋಡ್ ಸ್ಕ್ಯಾನ್ ಬಳಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಸಂಪೂರ್ಣ ಡಿಜಿಟಲ್ ವಹಿವಾಟು ಭವಿಷ್ಯದ ಭಾರತದ ಮುನ್ನೋಟವಾಗಿದ್ದು ಜನರನ್ನು ಆ ನಿಟ್ಟಿನಲ್ಲಿ ಪ್ರೇರೇಪಿಸುವ ಪ್ರಯತ್ನವೂ ಇದಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತಿರಲು ಈ ಬಾರಿ ಕ್ರಮಬದ್ಧವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು ಕೊಟ್ಟಾರ ಚೌಕಿ ಕಡೆಯಿಂದ ಬರುವ ವಾಹನಗಳಿಗೆ ಉರ್ವ ಚರ್ಚ್ ಆವರಣ, ಉರ್ವ ಆಟದ ಮೈದಾನ, ಹಾಗೂ ಲೇಡಿಹಿಲ್ ವಿಕ್ಟೋರಿಯಾ ಕಾಂಪೋಸಿಟ್ ಪಿಯು ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.