ಸಮುದ್ರದಲ್ಲಿ ಮೀನುಗಳು ಕಾಣೆ ಕಡಲ ಮಕ್ಕಳು ಬರಿಗೈಲಿ ಮರಳಿದ್ದಾರೆ
ಸಮುದ್ರದಲ್ಲಿ ಮೀನುಗಳು ಕಾಣೆ ಕಡಲ ಮಕ್ಕಳು ಬರಿಗೈಲಿ ಮರಳಿದ್ದಾರೆ
ಮಂಗಳೂರು, ಫೆಬ್ರವರಿ 27: ಈ ಬಾರಿ ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದ್ದು, ನೀರಿಲ್ಲದೇ, ಸುಡು ಬಿಸಿಲಿನಲ್ಲಿ ಜನ ತತ್ತರಿಸುತ್ತಿದ್ದಾರೆ. ಈ ಬಾರಿಯ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ನೀರಿನ ಬರ ಮಾತ್ರವಲ್ಲದೆ, ಅಗಾಧವಾದ ಸಮುದ್ರದಲ್ಲಿ ಮತ್ಸ್ಯ ಕೂಡ ಬರ ಎದುರಾಗಿದೆ.
ಈ ವೇಳೆ ಮೀನುಗಾರಿಕೆಗೆ ತೆರಳ ಬೇಕಿದ್ದ ನೂರಾರು ಬೋಟುಗಳು ಈಗಲೇ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿರುವ ಕಡಲ ಮಕ್ಕಳು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಫೆಬ್ರವರಿ ಹಾಗೂ ಮಾರ್ಚ್ ಸಮೃದ್ಧವಾಗಿ ಮೀನುಗಳು ದೊರೆಯುವ ಕಾಲ. ಮೀನುಗಾರರೂ ಒಂದಷ್ಟು ಜೇಬು ತುಂಬಿಸುವ ಕಾಲ. ಆದರೆ ಈ ಬಾರಿ ಕಡಲಾಳದಲ್ಲಿ ಮತ್ಸ್ಯಕ್ಷಾಮ ಹೆಚ್ಚಾಗಿದೆ. ಹೀಗಾಗಿ ಮೀನುಗಾರರು ನಿರೀಕ್ಷಿಸಿದ ಲಾಭ ಇರಲಿ, ಖುರ್ಚುಗಳನ್ನು ಸಮದೂಗಿಸಲು ಪರದಾಡುವಂತಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಕೇರಳ ಹಾಗೂ ತಮಿಳುನಾಡಿನ ಮೀನುಗಾರಿಕಾ ಬೋಟ್‌ಗಳು ನಿಷೇಧಿತ ಲೈಟ್ ಫಿಶಿಂಗ್, ಬುಲ್ ಟ್ರಾಲ್ ಫಿಶಿಂಗ್ ನಡೆಸುತ್ತಿದೆ. ಈ ಬಗ್ಗೆ ಕಾನೂನಿದ್ದರೂ, ಪರ ರಾಜ್ಯದ ಮೀನುಗಾರರು ಇಲ್ಲಿಗೆ ಬಂದು ನಿಯಮ ಮೀರಿ ಮೀನುಗಾರಿಕೆ ನಡೆಸುತ್ತಿರುವುದೇ ಇದಕ್ಕೆ ಕಾರಣ ಎಂದು ಕರಾವಳಿಯ ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಮುದ್ರ ಮೀನುಗಾರಿಕೆಗೆ ಗಡಿ ಭೇದವಿಲ್ಲ. ತಮಿಳುನಾಡಿನ ಮೀನುಗಾರರು ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೆ ಇಲ್ಲಿನ ಬೋಟುಗಳು ಮೀನುಗಾರಿಕೆಗೆ ತಮಿಳುನಾಡು ಕಡೆಗೆ ಹೋದಲ್ಲಿ ಅವರ ಮೇಲೆ ಹಲ್ಲೆಗಳಾಗುತ್ತಿದೆ. ಬೋಟುಗಳಿಗೆ, ಮೀನುಗಾರಿಕಾ ಪರಿಕರಗಳಿಗೆ ಹಾನಿ ಮಾಡಲಾಗುತ್ತಿದೆ. ಪರಿಣಾಮ ಕಷ್ಟ – ನಷ್ಟಗಳನ್ನು ಎದುರಿಸಲಾಗದೆ. ಕಳೆದೆರಡು ತಿಂಗಳಿಂದ ಸಮುದ್ರಕ್ಕೆ ತೆರಳದೆ ದಕ್ಕೆಯಲ್ಲಿ ಬೋಟ್‌ಗಳು ಲಂಗರು ಹಾಕುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸಲು ದೇಶದಲ್ಲಿ ಮೀನುಗಾರಿಕೆಗೆ ಒಂದೇ ರೀತಿಯ ಕಾನೂನು ಜಾರಿಗೆ ತರಬೇಕು. ನಿಷೇಧಿತ ಮೀನುಗಾರಿಕೆ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಮೀನುಗಾರರು ಒತ್ತಾಯ ಮಾಡುತ್ತಿದ್ದಾರೆ.
ಈ ಬಾರಿಯ ಮತ್ಸ್ಯಕ್ಷಾಮದಿಂದ ಮೀನುಗಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಮೀನುಗಾರರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ.