ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ,
ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ
ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಹೆದ್ದಾರಿಯಲ್ಲಿ ಸಾಗುವವರು ಒಂದು ರೀತಿಯ ಸಮಸ್ಯೆ ಎದುರಿಸಿದರೆ ಹೆದ್ದಾರಿಯ ಇಕ್ಕೆಲಗಳಲ್ಲಿ ಮನೆ, ಕೃಷಿ ಭೂಮಿ, ವ್ಯವಹಾರ ನಡೆಸುತ್ತಿರುವವರು ನಿತ್ಯ ನರಕಯಾತನೆ ಅನುಭವಿಸಬೇಕಾದ ಸ್ಥಿತಿ ಇದೆ. ಹೆದ್ದಾರಿ ಅಂಚಿನ ಎಷ್ಟೋ ಮನೆಗಳು ಅಪಾಯದಲ್ಲಿವೆ. ದಾರಿಯನ್ನು ಕಳೆದುಕೊಂಡಿವೆ. ಸಾಕಷ್ಟು ಕೃಷಿ ಭೂಮಿಗಳಿಗೆ ಮಳೆ ನೀರಿನ ಜತೆಗೆ ಕೆಸರು ನುಗ್ಗಿ ಇಡೀ ಕೃಷಿಯೇ ನಾಶವಾಗುವ ಸ್ಥಿತಿ ಎದುರಾಗಿದೆ.
ನೇರವಾದ ಹೆದ್ದಾರಿಯ ನಿರ್ಮಾಣ, ಏರು- ತಗ್ಗುಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಹೆದ್ದಾರಿ ಅಂಚಿನ ನಿವಾಸಿಗಳ ಹಿತವನ್ನು ನೋಡದೆ ವಿನ್ಯಾಸ ಮಾಡಲಾಗಿದೆ. ಇದರ ಪರಿಣಾಮ ಎತ್ತರದಲ್ಲಿರುವ ಮತ್ತು ತಗ್ಗಿನಲ್ಲಿರುವ ಮನೆಗಳು ಸಂಪರ್ಕದ ದಾರಿಯನ್ನೇ ಕಳೆದುಕೊಂಡಿವೆ. ಎತ್ತರದಲ್ಲಿರುವ ಮನೆಗಳ ಬುಡಕ್ಕೇ ಜೆಸಿಬಿ ನುಗ್ಗಿದೆ. ಹೀಗಾಗಿ ಕೆಲವು ಮನೆಗಳ ಪಂಚಾಂಗವೇ ಅಪಾಯದಲ್ಲಿದೆ. ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೆ ಮಣ್ಣು ನುಗ್ಗಿ ಈಗಲೂ ಅಂಗಳದಲ್ಲಿ ಮಣ್ಣಿನ ರಾಶಿ ಕಾಣಬಹುದಾಗಿದೆ. ಸಾಕಷ್ಟು ಕೃಷಿ ತೋಟಗಳು, ಗದ್ದೆಗಳಲ್ಲಿ ಮಣ್ಣು, ಕೆಸರು ತುಂಬಿದ್ದು, ಬೆಳೆ ನಾಶದ ಜತೆಗೆ ಮತ್ತೆ ಕೃಷಿ ಮಾಡಲಾಗದ ಸ್ಥಿತಿ ಇದೆ.
ಮನೆ, ಕೃಷಿಯ ಜತೆಗೆ ಹೆದ್ದಾರಿ ಬದಿ ಸಣ್ಣ ಅಂಗಡಿ, ಉದ್ಯಮ ಸಂಸ್ಥೆಗಳ ಸ್ಥಿತಿಯೂ ನೆಲಕಚ್ಚಿ ಹೋಗಿದ್ದು, ಸಾಕಷ್ಟು ಕಡೆ ಸಂಪರ್ಕ ರಸ್ತೆ, ಕಾಲು ದಾರಿಯೂ ಇಲ್ಲದೆ ವ್ಯಾಪಾರಕ್ಕೂ ಬಲುದೊಡ್ಡ ಹೊಡೆತ ಬಿದ್ದಿದೆ. ಕೆಸರಿನ ಕಾರಣಕ್ಕೆ ಹೆದ್ದಾರಿಯಲ್ಲಿ ಸಾಗುವವರು ವಾಹನವನ್ನು ನಿಲ್ಲಿಸಲು ಹಿಂದೇಟು ಹಾಕಿ ವ್ಯಾಪಾರ ಬೇರೆಡೆಗೆ ಹೋಗುತ್ತಿದೆ. ಇನ್ನು ವಿಪರೀತ ಧೂಳಿನ ಪರಿಣಾಮ ಬೇಕರಿ ಮಳಿಗೆಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಳಿಗೆಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ
ಮಾಣಿ ಜಂಕ್ಷನ್: ನೂರಾರು ಟೆನ್ಶನ್
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಾಣಿ ಜಂಕ್ಷನ್‌ನಲ್ಲಿ ರಾ.ಹೆ.75ರಿಂದ ಮತ್ತೂಂದು ಹೆದ್ದಾರಿ ಕವಲೊಡೆಯುತ್ತಿದ್ದು, ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ವಾಹನಗಳು ಡೈವರ್ಶನ್ ತೆಗೆದುಕೊಳ್ಳುತ್ತಿದೆ. ಹೀಗಾಗಿ ಬಿ.ಸಿ.ರೋಡು ಭಾಗದಿಂದ ಉಪ್ಪಿನಂಗಡಿಗೆ ಹೋಗುವ ವಾಹನಗಳು, ಪುತ್ತೂರು ಕಡೆಗೆ ಸಾಗುವ ವಾಹನಗಳು, ಎರಡೂ ಭಾಗದಿಂದಲೂ ಬಿ.ಸಿ.ರೋಡು ಕಡೆಗೆ ಆಗಮಿಸುವ ವಾಹನಗಳು ಹೀಗೆ ಎಲ್ಲವೂ ಗೊಂದಲಮಯವಾಗಿದೆ.