ಒಡಿಶಾದಲ್ಲಿ ಭೀಕರ ರೈಲು ಅಪಘಾತ: 50 ಸಾವು
ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಬಾಲಸೋರ್ನ ಬಹನಾಗ ನಿಲ್ದಾಣದ ಬಳಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ, ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ನ (12841) 7 ಬೋಗಿಗಳು ಹಳಿ ತಪ್ಪಿವೆ.
ಮೂಲಗಳ ಪ್ರಕಾರ, ಅಪಘಾತದಲ್ಲಿ ಇದುವರೆಗೆ 179 ಜನರು ಗಾಯಗೊಂಡಿದ್ದಾರೆ ಮತ್ತು 50 ಜನರು ಸಾವನ್ನಪ್ಪಿದ್ದಾರೆ.
ಆದಾಗ್ಯೂ, ರೈಲ್ವೆ ಇನ್ನೂ ಯಾವುದೇ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಗಾಯಗೊಂಡವರನ್ನು ಸೊರೊ ಸಿಎಚ್ಸಿ, ಗೋಪಾಲ್ಪುರ ಸಿಎಚ್ಸಿ ಮತ್ತು ಖಂಡಪಾಡಾ ಪಿಎಚ್ಸಿಗೆ ದಾಖಲಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳು ಸ್ಥಳಕ್ಕೆ ತಲುಪಿವೆ.
ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಮತ್ತು ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯ ಅಗತ್ಯವಿದ್ದರೆ ಎಸ್‌ಆರ್ಸಿಗೆ ತಿಳಿಸಲು ಬಾಲಸೋರ್ ಕಲೆಕ್ಟರ್ಗೆ ನಿರ್ದೇಶಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ. ಇನ್ನು ಎಸ್‌ಆರ್ಸಿ ತುರ್ತು ನಿಯಂತ್ರಣ ಕೊಠಡಿ ಸಂಖ್ಯೆ: 0678 2262286 ಆಗಿದೆ.
ಸಂತ್ರಸ್ತರಿಗೆ ಎಲ್ಲ ರೀತಿಯಲ್ಲೂ ಬೆಂಬಲ: ಮೋದಿ
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದ ಬಗ್ಗೆ ಪ್ರಧಾನಿ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಅವರು ಟ್ವಿಟ್ ಮಾಡಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡಲಾಗುವುದು ಎಂದು ಮೋದಿ ತಿಳಿಸಿದ್ದಾರೆ.