ಶ್ಲೋಕ – 19
ಶ್ಲೋಕ – 19
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥೧೯॥
ಯಃ ಏನಮ್ ವೇತ್ತಿ ಹಂತಾರಮ್ ಯಃ ಚ ಏನಮ್ ಮನ್ಯತೇ ಹತಮ್ ಉಭೌ ತೌ ನ ವಿಜಾನೀತಃ ನ ಅಯಮ್ ಹಂತಿ ನ ಹನ್ಯತೇ –ಯಾರು ಇವನನ್ನು ‘ಕೊಲ್ಲುವವನು’ ಎಂದು ತಿಳಿದಿದ್ದಾನೆ ಮತ್ತು ಯಾರು ಇವನನ್ನು ‘ಸತ್ತವನು’ ಎಂದು ತಿಳಿದಿದ್ದಾನೆ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ.
ಜೀವವನ್ನು ಕೊಲ್ಲಬಹುದು(ಕೊಲ್ಲುತ್ತೇನೆ) ಎಂದು ಭಾವಿಸುವವರಿಗೆ ಹಾಗು ಅದು ನಾಶವಾಯಿತು (ಕೊಲ್ಲಲ್ಪಟ್ಟಿತು) ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ ‘ಕೌರವರು ನನ್ನ ಕೈಯಿಂದ ಸಾಯುತ್ತಾರೆ’ ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಚೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ.