ಕನಕದಾಸರು ದಾಸರಪದಗಳನ್ನು ಯಾವಾಗ ಬರೆಯಲು ಆರಂಭಿಸಿದರು..
ಕನಕದಾಸರು ದಾಸರಪದಗಳನ್ನು ಯಾವಾಗ ಬರೆಯಲು ಆರಂಭಿಸಿದರು..
ದಾಸ ಸಾಹಿತ್ಯ ಪರಂಪರೆಯ ಸರಿಸುಮಾರು ಎರಡುನೂರ ಐವತ್ತಕ್ಕೂ ಹೆಚ್ಚು ದಾಸರಲ್ಲಿ ಅತ್ಯಂತ ಪ್ರಭಾವಿ ದಾಸಶ್ರೇಷ್ಠ ಹರಿದಾಸರು ಕನಕದಾಸರು.ಹಾವೇರಿ ಜಿಲ್ಲೆಯ ‘ಬಾಡ’ ಎಂಬ ಹಳ್ಳಿಯ ಕುರುಬ ನಾಯಕ ಜನಾಂಗದ ಬೀರಪ್ಪ ನಾಯಕ ಬಚ್ಚಮ್ಮದಂಪತಿಗಳ ಮಗನಾಗಿ ಜನಿಸಿದವರು.ಬಾಲ್ಯದ ಹೆಸರು ತಿಮ್ಮಪ್ಪ ನಾಯಕ.೧೫೦೮–೧೬೦೬ ಇವರ ಜೀವಿತಕಾಲವೆಂದು ತಿಳಿದು ಬರುತ್ತದೆ.ವಿಜಯನಗರದ ರಾಜರ ಸೇನಾ ದಂಡನಾಯಕರಾಗಿದ್ದ ತಂದೆಯವರ ಕಾಲಾನಂತರ ತಿಮ್ಮಪ್ಪ ನಾಯಕರು ಹುದ್ದೆಯನ್ನು ಮುಂದುವರಿಸಿದರು.ಯುದ್ಧಭೂಮಿಯಲ್ಲಾದ ತೀವ್ರಗಾಯಗಳಿಂದ ಮನನೊಂದ ನಾಯಕರಿಗೆ‘ನೀನು ದಾಸನಾಗು’ಎಂದು ಹೇಳಿದಂತಾಯಿತೆಂಬ ಉಲ್ಲೇಖವಿದೆ.ಅಧಿಕಾರ ಕೈಯಲ್ಲಿದ್ದಾಗ ಭೂಮಿಯ ಅಗೆತದ ಕೆಲಸ ಮಾಡಿಸುವಾಗ ದೊರೆತ ಬಂಗಾರದಿಂದ ಕಾಗಿನೆಲೆಯಲ್ಲಿ ತನ್ನ ಕುಲದೇವರಾದ ಆದಿಕೇಶವನ ಮಂದಿರವನ್ನು ಕಟ್ಟಿಸಿದರಂತೆ.ಮುಂದೆ‘ಕನಕದಾಸ’ರಾದರು.ವ್ಯಾಸರಾಯರ ಮೆಚ್ಚಿನ,ನೆಚ್ಚಿನ ಶಿಷ್ಯರಂತೆ.ಎಲ್ಲೆಡೆ ಭಗವಂತನಿದ್ದಾನೆ,ಆತನ ಚಕ್ಷುಗಳಿಂದ ತಪ್ಪಿಸಲು ಸಾಧ್ಯವಿಲ್ಲ ವೆಂದು ಸಾರಿದವರು.
ಸಮಾಜದಲ್ಲಿರುವ ಜಾತಿ ಭಾವನೆಗೆ ರೋಸಿದ್ದರು.ಓರ್ವ ತತ್ವಜ್ಞಾನಿ,ಸಂತ,ದಾರ್ಶನಿಕರಾಗಿ ಕನ್ನಡ ಭಾಷೆಯ ಕೈಂಕರ್ಯ ಮಾಡಿದವರು.೧೬ನೇ ಶತಮಾನ ಕಾಲದ ಸಾಮಾಜಿಕ ಸ್ಥಿತಿಗತಿ ,ಅವರನ್ನು ದಾಸರಾಗಿ ಪರಿವರ್ತಿಸಿತು.ಕೆಲಸವನ್ನು ಬಿಟ್ಟು, ಹಾಡುತ್ತಾ ಊರೂರು ತಿರುಗಾಟ ನಡೆಸಿದರು.ಸಾಮಾಜಿಕ ಮಡಿವಂತಿಕೆಯನ್ನು ವಿಡಂಬನಾತ್ಮಕವಾಗಿ ರಚಿಸಿ ಹಾಡುತ್ತಿದ್ದರಂತೆ.
ಕುಲಕುಲಕುಲವೆಂದು ಹೊಡೆದಾಡದಿರಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ತನು ನಿನ್ನದು ಈ ಜೀವನ ನಿನ್ನದು
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಡೊಂಕು ಬಾಲದ ನಾಯಕರೇ
ಈ ರೀತಿ ಸುಮಾರು ೩೧೬ ಕೀರ್ತನೆಗಳನ್ನು,ಉಗಾಭೋಗ,ಮಂಡಿಗೆ,ಸುಳಾದಿಗಳ ರಚನೆ ಮಾಡಿದ ಕೀರ್ತಿ ಇವರದು.
ಉಡುಪಿಗೆ ಬಂದಾಗ ಶ್ರೀಕೃಷ್ಣನ ಭೇಟಿಯಾಗಲು ನಿರಾಕರಣೆ ಮಾಡಿದಾಗ,ಹೊರಗೆಯೇ ನಿಂತು ಭಕ್ತಿಭಾವದಿಂದ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಹಾಡಿದಾಗ ಮೂರುತಿ ತಿರುಗಿತಂತೆ,ಇಂದಿಗೂ ಸಾಕ್ಷಿಯಾಗಿ ಕನಕನ ಕಿಂಡಿಯಿದೆ.ಶ್ರೇಷ್ಠ ಹರಿಭಕ್ತರಾದ ಕನಕದಾಸರು,ಮೋಹನ ತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತೆ, ಹರಿಭಕ್ತಿಸಾರ,ನೃಸಿಂಹಸ್ತ ಐದು ಮೇರುಕೃತಿಗಳನ್ನು ಬರೆದವರು.ಆದಿಕೇಶವರಾಯ ಅಂಕಿತನಾಮವನ್ನಿಟ್ಟು ಸಮಾಜದ ರೀತಿ-ನೀತಿಗಳನ್ನು ಖಂಡಿಸಿ,ತನ್ನನ್ನು ತಾನೇ ದಾಸಸಾಹಿತ್ಯಕ್ಕೆ ಒಡ್ಡಿಕೊಂಡ ಮಹಾನ್ ಶ್ರೇಷ್ಠರು.ಮನುಷ್ಯರೆಲ್ಲ ಒಂದೇ ಸಾರಿದರು.ಶ್ರೀಹರಿಯನ್ನು ಹಾಡಿ ಹೊಗಳಿದವರು.ಆಧ್ಯಾತ್ಮಿಕ ತತ್ವವೂ ಇದೆ.ಸಂದೇಶವೂ ಇದೆ.ಕವಿಯಾಗಿ,ದಾಸರಾಗಿ,ಸಮಾಜ ಸುಧಾರಕರಾಗಿ,ಬದುಕಿನ ಚಿತ್ರಣವನ್ನು ಖಂಡಿಸಿ ಹೀಗಿದ್ದರೆ ಸೊಗಸೆಂದು ಸಾರಿದ ದಿವ್ಯ ಚೇತನಕ್ಕೆ ನಮೋ ನಮ:
✍ರತ್ನಾ ಕೆ ಭಟ್,ತಲಂಜೇರಿ,ಪುತ್ತೂರು