• 9 ಡಿಸೆಂಬರ್ 2024

ಶ್ರೀ ಕನಕದಾಸರ ಚರಿತ್ರೆ!

 ಶ್ರೀ ಕನಕದಾಸರ ಚರಿತ್ರೆ!
Digiqole Ad

 

ಶ್ರೀ ಕನಕದಾಸರ ಚರಿತ್ರೆ!

 

ಕರ್ನಾಟಕ ದಾಸರು ಮತ್ತು ದಾಸ ಸಾಹಿತ್ಯಗಳಿಂದ ಸಂವೃದ್ಧಪೂರ್ಣವಾದ ರಾಜ್ಯವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ರ್ಣವಾಗಿದೆ. ದಾಸ ಪರಂಪರೆಯಲ್ಲಿ ಸುಮಾರು 250ಕ್ಕೂ ಹೆಚ್ಚಿನ ದಾಸರುಗಳು ಇದ್ದು, ಅಂತಹ ಶ್ರೇಷ್ಠ ದಾಸರಲ್ಲಿ ದಾಸರುಗಳಲ್ಲಿ ಕನಕದಾಸರು ಮತ್ತು ಪುರಂದರದಾಸರುಗಳು ಅಗ್ರೇಸರರಾಗಿ ನಿಲ್ಲುತ್ತಾರೆ. ತಮ್ಮ ಸುಪ್ರಸಿದ್ಧ ಕೀರ್ತನೆಗಳ ಮೂಲಕ ಕನ್ನಡ ಭಾಷೆಯ ಸಾಹಿತ್ಯವನ್ನು ಸಂವೃದ್ಧಗೊಳಿಸಿದ್ದಲ್ಲದೇ, ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನು ನೀಡುವ ಮೂಲಕ ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದೇ ಪ್ರಸಿದ್ಧರಾಗಿದ್ದಾರೆ.

ಶ್ರೀ ಕನಕದಾಸರು ಅತ್ಯಂತ ಕೆಳವರ್ಗದಿಂದ ಬಂದಿದ್ದು ಅವರ ಹೆಸರು -ತಿಮ್ಮಪ್ಪನಾಯಕ ಎಂದಿದ್ದು ಅವರು ವಿಜಯನಗರ ಸಾಮ್ರಾಜ್ಯದ ದಂಡನಾಯಕರಲ್ಲಿ ಒಬ್ಬರಾಗಿದ್ದವರು. ಯುದ್ಧವೊಂದರಲ್ಲಿ ಆದ ಅಪಮಾನಗಳಿಂದಾಗಿ ಅವರಲ್ಲಿ ವೈರಾಗ್ಯವುಂಟಾಗಿ, ಭಗವಂತನ ಅನುಗ್ರಹದಿಂದ ಹರಿಭಕ್ತರಾಗಿ, ಕನಕದಾಸ ಎಂಬ ಹೆಸರಿನಿಂದ ಪ್ರಖ್ಯಾತರಾದ ಕಥೆಯೇ ಬಲು ರೋಚಕವಾಗಿದ್ದು ಅದರ ಸವಿವರಗಳನ್ನು ತಿಳಿಯೋಣ.

ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿಯು ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಎಂಬ ಗ್ರಾಮದ ಮೂಲಕವೇ ಹಾಯ್ದು ಹೋಗುತ್ತಿದ್ದ ಕಾರಣ, ಬಾಡ ಒಂದು ಆಯಕಟ್ಟಿನ ಸ್ಥಳವಾಗಿತ್ತು. ಹಾಗಾಗಿ ಆ ಆಯಕಟ್ಟಿನ ಜಾಗವಾದ ಬಂಕಾಪುರಲ್ಲಿ ಆಪತ್ಕಾಲಕ್ಕೆಂದು ಕಾದಿಟ್ಟ ಸೈನ್ಯದದ ಸೇನಾಪತಿಯಾಗಿ ಶ್ರೀ ಬೀರಪ್ಪನಾಯಕ ನೇಮಿಸಲ್ಪಟ್ಟು ಅವರು ಡಣ್ಣಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇಂತಹ ಬೀರಪ್ಪನಾಯಕ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಬಚ್ಚಮ್ಮ ಅವರಿರು ಕುರುಬ ಜನಾಂಗಕ್ಕೆ ಸೇರಿದ್ದರೂ, ತಿರುಪತಿಯ ತಿಮ್ಮಪ್ಪನ ಮೇಲೆ ಬಹಳ ನಂಬಿಕೆ ಇದ್ದ ಕಾರಣ, ಶ್ರೀ ವಂಕಟೇಶ್ವರ ಸ್ವಾಮಿಯನ್ನು ತಮ್ಮ ಆರಾಧ್ಯ ದೈವವನ್ನಾಗಿಸಿಕೊಂಡಿದ್ದಲ್ಲದೇ, ಅಚಾರ್ಯತ್ರಯದಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು ಆರಂಭಿಸಿದ ಶ್ರೀವೈಷ್ಣವ ಪಂಥವನ್ನು ಅನುಸರಿಸುತ್ತಿದ್ದಂತಹ ಪರಮ ದೈವಭಕ್ತರಾಗಿದ್ದರು.

ಇಂತಜ ಬೀರಪ್ಪ ನಾಯಕ ದಂಪತಿಗಳು ತಮ್ಮ ವಂಶವನ್ನು ಉದ್ಧಾರ ಮಾಡುವಂತಹ ಮಗನನ್ನು ಕರುಣಿಸು ಎಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರ ಫಲವೇನೋ ಎಂಬುವಂತೆ 1509ರ ಕಾರ್ತೀಕ ಬಹುಳ ತೃತೀಯದಂದು ಜನಿಸಿದ ಮಗುವಿಗೆ ಬಹಳ ಸಂತೋಷದಿಂದಲೇ ತಮ್ಮ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ನೆನಪಿನಲ್ಲಿ ತಿಮ್ಮಪ್ಪ ನಾಯಕ ಎಂದು ನಾಮಕರಣ ಮಾಡಿದರು. ಸೇನಾಧಿಪತಿಯ ಮಗನಾಗಿ ಜನಿಸಿದ ತಿಮ್ಮಪ್ಪ ನಾಯಕರ ಆರಂಭಿಕ ಶಿಕ್ಷಣ ಬಂಕಾಪುರದ ಶ್ರೀ ಶ್ರೀನಿವಾಸಾಚಾರ್ಯರ ಬಳಿ ನಡೆದು ಅವರ ಬಳಿ ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತರಾಗಿದ್ದಲ್ಲದೇ, ಶಿಕ್ಷಣದ ಜೊತೆ ಜೊತೆಯಲ್ಲೇ ಕ್ಷಾತ್ರತೇಜದ ಪ್ರತೀಕವಾಗಿ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತಿದ್ದರು. ಕಿರಿವಯಸ್ಸಿನಲ್ಲಿಯೇ ತಮ್ಮ ತಂದೆ ಬೀರಪ್ಪನಾಯಕರು ತೀರಿಕೊಂಡಾಗ ತನ್ನ ತಾಯಿ ಬಚ್ಚಮ್ಮನವರ ಆಶೀರ್ವಾದದೊಂದಿಗೆ ವಂಶಪಾರಂಪರ್ಯವಾಗಿ ತಿಮ್ಮಪ್ಪ ನಾಯಕರೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕರಾದರು.

ಹೇಳುವುದಕ್ಕೆ ವಿಜಯನಗರ ಸಾಮ್ರಾಜ್ಯದ ಡಣ್ಣಾನಾಯಕರಾದರೂ, ಬಹಳ ಮೃದು ಮನಸ್ಸಿನ ಧರ್ಮಭೀರುವಾಗಿ ಸದಾಕಾಲವೂ ಕಾಗಿನೆಲೆಯ ಕೇಶವನ ಮೇಲೆ ಭಕ್ತಿಯನ್ನು ಹೊಂದಿದ್ದರು. ಅದೊಮ್ಮೆ ತಮ್ಮ ಪ್ರಾಂತ್ಯದಲ್ಲಿ ಭೂಮಿಯೊಂದನ್ನು ಅಗೆಯುತ್ತಿದ್ದಾಗ ದೊರೆತ ಭಾರೀ ನಿಧಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ, ತಮ್ಮ ಆರಾಧ್ಯದೈವ ಕಾಗಿನೆಲೆ ಕೇಶವನಿಗೊಂದು ಭವ್ಯವಾದ ದೇವಸ್ಥಾನವೊಂದನ್ನು ಕಟ್ಟಿಸಿ ಉಳಿದ ಹಣವನ್ನು ಬಡ ಬಗ್ಗರಿಗೆ ದಾನ ಮಾಡಿದ ಕಾರಣ, ಜನರು ಅವರ ಹೆಸರನ್ನು ತಿಮ್ಮಪ್ಪ ಎನ್ನುವ ಬದಲು ಕನಕಪ್ಪ ಎಂದು ಕರೆಯಲು ಆರಂಭಿಸಿದರು.

 

ಕಾಗಿನೆಲೆ ಕೇಶವ ಆಪಾರ ಭಕ್ತರಾಗಿದ್ದ ಕನಕ ನಾಯಕರಿಗೆ ಆಗ್ಗಾಗ್ಗೆ ಕೇಶವರ ದೇವರು ಕನಸ್ಸಿನಲ್ಲಿ ನೀನು ಸೇನಾಧಿಪತಿಗಿಂಗಲೂ ದಾಸನಾಗುವುದಕ್ಕೆ ಸರಿ. ಹಾಗಾಗಿ ದಾಸನಾಗು ಎಂಉ ಹೇಳುತ್ತಿದ್ದರೂ ಕನಕ ನಾಯಕರು ಅದಕ್ಕೊಪ್ಪದೆ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಇಷ್ಟರ ಮಧ್ಯೆ ಅವರ ಹೆತ್ತ ತಾಯಿ ಮತ್ತು ಅವರ ಪ್ರೀತಿಯ ಮಡದಿಯೂ ಸಹಾ ತೀರಿಹೋದರೂ, ಅವರಲ್ಲಿ ಕಾಣದ ವೈರಾಗ್ಯ, ವಿಜಯನಗರ ಸಾಮ್ರಾಜ್ಯದ ಪರವಾಗಿ ಯುದ್ಧ ಮಾಡುತ್ತಿದ್ದ ಸಮಯದಲ್ಲಿ ಕಾಳಗದ ಸಮಯದಲ್ಲಿ ಶತ್ರು ಪಡೆಯವನೊಬ್ಬ ನಡೆಸಿದ ಧಾಳಿಯಿಂದಾಗಿ ಕನಕ ನಾಯಕರ ಕೈಯ್ಯಲ್ಲಿದ್ದ ಕತ್ತಿಯೂ ಕೆಳಗೆ ಬಿದ್ದಿದ್ದಲ್ಲದೇ, ತೀವ್ರವಾದ ಗಾಯದಿಂದಾಗಿ, ರಕ್ತಸ್ರಾವವಾಗಿ ರಣರಂಗದಲ್ಲಿ ಬಿದ್ದದ್ದನ್ನು ಕಂಡ ಶತ್ರು ಪಡೆಯುವರು ನಾಯಕರು ಸತ್ತಿರಬಹುದೆಂದು ಭಾವಿಸಿ ಅಲ್ಲೇ ಬಿಟ್ಟು ಹೋದರು. ಆಗ ಸಾಮಾನ್ಯ ಮನುಷ್ಯನ ರೂಪದಲ್ಲಿ ಬಂದ ಆದಿ ಕೇಶವನು ನಾಯಕರ ಆರೈಕೆ ಮಾಡಿ ಬದುಕಿಸುತ್ತಾರೆ. ದೇವರೇ ಸಾಮಾನ್ಯ ಮನುಷ್ಯರ ರೂಪದಲ್ಲಿ ಬಂದು ಕಾಪಾಡಿದ ವಿಷಯ ತಿಳಿದ ಕನಕ ನಾಯಕರು, ಕಾಗಿನೆಲೆಗೆ ಬಂದು ಆದಿ ಕೇಶವನಿಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಾಗ ಮತ್ತೆ ಅವರ ಕನಸ್ಸಿನಲ್ಲಿ ಬಂದು ನೀನು ವ್ಯಾಸರಾಜರ ಬಳಿ ಹೋಗಿ ದಾಸತ್ವ ದೀಕ್ಷೆ ಪಡೆಯಲು ಸೂಚಿಸಿದ ಕಾರಣ, ವ್ಯಾಸಸಮುದ್ರ ನಿರ್ಮಾಣದಲ್ಲಿದ್ದ ಶ್ರೀ ವ್ಯಾಸರಾಯರ ಭೇಟಿಯಾಗಿ ಹರಿದಾಸತ್ವ ಸ್ವೀಕರಿಸುವ ಮೂಲಕ ಕನನ ನಾಯಕರು ಕನಕದಾಸರಾಗುತ್ತಾರೆ.

ವ್ಯಾಸರಾಯರು ಕನಕದಾಸರ ಪೂರ್ವಾಶ್ರಮದ ಜಾತಿಯನ್ನು ಲೆಖ್ಖಿಸದೇ ಅತ್ಯಂತ ಪ್ರೀತಿಯಿಂದ ತಮ್ಮ ಮೆಚ್ಚಿನ ಶಿಷ್ಯರನ್ನಾಗಿ ಸ್ವೀಕರಿಸಿ ಅವರಿಗೆ ಮಧ್ವ ತತ್ವಶಾಸ್ತ್ರವನ್ನು ಹೇಳಿಕೊಡುತ್ತಾರೆ. ಈ ರೀತಿಯ ಶಿಷ್ಯತ್ವವನ್ನು ಮಾಡುತ್ತಿದ್ದಾಗ ಆವರ ಆಶ್ರಮದಲ್ಲಿ ಅವರ ಸಹಪಾಠಿಗಳು ಕೊಟ್ಟ ಕೀಟಲೆಗಳನ್ನೆಲ್ಲಾ ಸಹಿಸಿಕೊಂಡಿದ್ದಲ್ಲದೇ, ತಾವು ಅವರಿಗಿಂತಲೂ ಉತ್ತಮವಾದ ಭಗವಂತನ ಶಿಷ್ಯ ಎಂದು ಗುರುಗಳು ಕೊಟ್ಟ ಬಾಳೇ ಹಣ್ಣಿನ ಪರೀಕ್ಷೆಯ ಮೂಲಕ ಭಗವಂತ ಸರ್ವಾಂತರ್ಯಾಮಿ ಎಂಬುದನ್ನು ಕನಕದಾಸರು ನಿರೂಪಿಸಿರುತ್ತಾರೆ. ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿದ್ದ ಕನಕ ದಾಸರು ಅದೊಮ್ಮೆ ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ಪಡೆಯಲು ಉಡುಪಿಗೆ ಹೋದಾಗ ಆವರ ಜಾತಿಯ ಕಾರಣದಿಂದ ಅವರನ್ನು ದೇವಾಲಯದ ಒಳಗೆ ಬಿಡಲು ಒಪ್ಪದೇ ಹೋದಾಗ, ಬಹಳ ದುಃಖಿತರಾದ ಕನಕದಾಸರು, ದೇವಾಲಯವನ್ನು ಹಾಗೇ ಪ್ರದಕ್ಷಿಣೆ ಹಾಕುತ್ತಾ, ದೇವಾಲಯದ ಹಿಂಭಾಗಕ್ಕೆ ಬಂದು ಭಕ್ತಿ ಪರವಶರಾಗಿ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂದು ಹಾಡಿದ್ದನ್ನು ಮೆಚ್ಚಿದ ಶ್ರೀ ಕೃಷ್ಣ ಪರಮಾತ್ಮನೇ, ದೇವಾಲಯದ ಹಿಂದಿನ ಭಾಗದ ಗೋಡೆ ಬಿರುಕು ಬಿಟ್ಟಿದ್ದಲ್ಲದೇ, ಶ್ರೀ ಕೃಷ್ಣನ ವಿಗ್ರಹವೇ ಹಿಂದಕ್ಕೆ ತಿರುಗಿ ಕನಕದಾಸರಿಗೆ ದರ್ಶನವನ್ನು ನೀಡಿದ್ದ ಕುರುಹಾಗಿ ಇಂದಿಗೂ ಸಹಾ ಉಡುಪಿಯ ಶ್ರೀಕೃಷ್ಣನ ದೇವಾಲಯದಲ್ಲಿನ ಶ್ರೀಕೃಷ್ಣ ಬಾಗಿಲಿಗೆ ಬೆನ್ನು ಮಾಡಿಯೇ ಇದ್ದು ತನ್ನ ಭಕ್ತ ಕನಕದಾಸರಿಗೆ ದರ್ಶನ ನೀಡಿರುವ ಕಿಂಡಿಯು ಕನಕನ ಕಿಂಡಿ ಎಂದೇ ಪ್ರಸಿದ್ದಿ ಪಡೆದಿರುವುದು ಗಮನಾರ್ಹವಾಗಿದೆ.

ಕೀಳ್ಜಾತಿ, ಮೇಲ್ಜಾತಿ ಎಂದು ಪರಸ್ಪರ ಹೊಡೆದಾಡುತ್ತಿದ್ದದ್ದನ್ನೇ ಗಮನಿಸಿದ ಕನಕದಾಸರು ಬಹುಶಃ ಇದೇ ಸಮಯದಲ್ಲಿಯೇ, ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ, ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ, ರಾಗೀ ತಂದೀರಾ ಭಿಕ್ಷಕೆ ರಾಗೀ ತಂದೀರಾ, ಮುಂತಾದ ಕೀರ್ತನೆಗಳನ್ನು ರಚಿಸಿದ್ದಲ್ಲದೇ ಅವುಗಳ ಜೊತೆ ನೂರಾರು ಕೀರ್ತನೆಗಳನ್ನು, ಉಗಾಭೋಗಗಳನ್ನು ಭಕ್ತಿಯಿಂದ ಹಾಡುತ್ತಾ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಕಾಗಿನೆಲೆಯ ಆದಿಕೇಶವರಾಯ ಎಂಬ ಅಂಕಿತನಾಮವನ್ನು ಬಳಸಿರುವುದು ವಿಶೇಷವಾಗಿದೆ.

ಕನಕದಾಸರು ಮತ್ತು ಪುರಂದರದಾಸರು ಮತ್ತು ಶ್ರೀ ಕೃಷ್ಣದೇವರಾಯ ಇವರೆಲ್ಲರೂ ಸಮಕಾಲೀನ ಮತ್ತು ಸಮಾನ ಮನಸ್ಕರಾಗಿದ್ದು, ಸ್ವತಂತ್ರ ಕಾಂತಿವುಳ್ಳವರು, ಸಮಾಜ ಸುಧಾರಕರು ಮತ್ತು ಒಂದೇ ವೈಚಾರಿಕ ಮನೋಧರ್ಮದವರಾಗಿದ್ದರು. ಕನಕದಾಸರ ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುವುದಲ್ಲದೇ, ಅವರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳನ್ನು ಉಲ್ಲೇಖಿಸಲಾಗಿದೆ. ಈಗ ಲಭ್ಯವಿರುವಂತೆ ಸುಮಾರು 300ಕ್ಕೂ ಹೆಚ್ಚಿನ ದೇವರನಾಮಗಳು, ಮುಂಡಿಗೆಗಳು ತತ್ವಪದಗಳಲ್ಲದೇ, 481 ಪದ್ಯಗಳುಳ್ಳ ನಳ ದಮಯಂತಿ ಕುರಿತಾದ ನಳಚರಿತ್ರೆ ಎಂಬ ಕಥಾ ಚಿತ್ರಣ, ಇನ್ನು ಭಾಮಿನೀ ಷಟ್ಪದಿಯಲ್ಲಿರುವ 110 ಪದ್ಯಗಳ ಹರಿಸರ್ವೋತ್ತಮರ ಸಾಧಕ ಕೃತಿಯಾದ ಹರಿಭಕ್ತಿಸಾರ, ಪ್ರಭು ಶ್ರೀರಾಮಚಂದ್ರನ ಮುಂದೆ ಹೋಗಿ ರಾಗಿ ಹೆಚ್ಚೋ? ಅಕ್ಕಿ ಹೆಚ್ಚೋ? ಎಂದು ಕೇಳಿದಾಗ ರಾಮಚಂದ್ರ ರಾಗಿಯೇ ಅಕ್ಕಿಗಿಂತ ಹೆಚ್ಚು ಉಪಯೋಗಿ ಎಂದು ಹೇಳಿದ್ದಾರೆ ಎಂಬ ವಿಚಾರವುಳ್ಳ ರಾಮಧಾನ್ಯ ಚರಿತೆ ಹೀಗೆ ಲೆಖ್ಖವಿಲ್ಲದಷ್ಟು ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪಾರವಾದ ವಿಶಿಷ್ಟ ಕೊಡುಗೆ ನೀಡಿದ್ದಲ್ಲದೇ, ಅವರು ಬಳಸಿರುವಂಥ ಪದ ಪ್ರಯೋಗಗಳು, ಅಲಂಕಾರಗಳು, ಛಂದಸ್ಸು ಚಮತ್ಕಾರ ವರ್ಣನೆಗಳಲ್ಲಿ ಕಾವ್ಯದ ಪ್ರಜ್ಞೆಯೆ ಎದ್ದು ಕಾಣಿಸುತ್ತಿದೆ.ಹೀಗೆ ಜಾತಿ ಮತಗಳ ನಡುವೆ ಮೇಲು ಕೀಳುಗಳ ವ್ಯವಸ್ಥೆ ಇದ್ದ ಕಾಲದಲ್ಲೇ, ನಾವೆಲ್ಲರೂ ದೇವರ ಸೃಷ್ಠಿಯಾಗಿರುವ ಕಾರಣ ಈ ಜಾತಿ ಮಥ ಪಂಥಗಳನ್ನೆಲ್ಲಾ ಪಕ್ಕಕ್ಕಿಟ್ಟು ಎಲ್ಲರೂ ಒಂದಾಗಿ ದೇವರನ್ನು ಆರಾಧಿಸೋಣ ಎಂದು ತಮ್ಮ ಕೀರ್ತನೆಗಳ ಮೂಲಕ ಕನ್ನಡ_ಸಾಹಿತ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಅನರ್ಘ್ಯವಾದ ಕೊಡುಗೆಯನ್ನು ನೀಡಿರುವ ಕನಕದಾಸರ ಅಭಿಲಾಷೆಯನ್ನು ಅಕ್ಷರಶಃ ಪಾಲಿಸುವ ಮೂಲಕ ಹಿಂದುಗಳೆಲ್ಲರೂ ಒಂದಾಗಿ ಮುನ್ನಡೆಯಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವೇ ಆಗಿದೆ ಅಲ್ಲವೇ?

ಉಮಾಸುತ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ