ಈ ಊರಲ್ಲಿ ಒಂದೇ ಒಂದು ಮದ್ಯಪಾನ ಅಂಗಡಿಯನ್ನು ತೆರೆಯಲಾಗಿಲ್ಲ…. ಇಲ್ಲಿದೆ ಕಾರಣ
ಈ ಊರಲ್ಲಿ ಒಂದೇ ಒಂದು ಮದ್ಯಪಾನ ಅಂಗಡಿಯನ್ನು ತೆರೆಯಲಾಗಿಲ್ಲ…. ಇಲ್ಲಿದೆ ಕಾರಣ
ನಂಜನಗೂಡಿನ ಬಳಿ ಇರುವ ಬದನವಾಳು ಎಂಬ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಮದ್ಯಪಾನ ಅಂಗಡಿಗಳನ್ನು ತೆರೆಯಲಾಗಿಲ್ಲ. ಅದಕ್ಕೆ ಕಾರಣವೇನು ಮತ್ತು ಇಲ್ಲಿ ಅಂತಹ ವಿಶೇಷತೆ ಏನಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ. ಬದನವಾಳು ಊರಿನಲ್ಲಿರುವ ವಿಶೇಷ ಸಂಗತಿಯೇನು ಮತ್ತು ಇಲ್ಲಿ ನೆಲೆಸಿರುವ ಸಿದ್ದೇಶ್ವರ ಸ್ವಾಮಿಯ ಪವಾಡದ ಕುರಿತು ಇಲ್ಲಿ ತಿಳಿಯೋಣ.
ಬದನವಾಳು ಊರು
ಈ ಊರಿಗೆ ಬದನವಾಳು ಎಂಬ ಹೆಸರು ಬರುವ ಮುಂಚೆ ಗಂಗವಾಡಿ ಎಂಬ ಹೆಸರಿನಿಂದ ಕರೆಯಲಾಗಿತ್ತು, ಏಕೆಂದರೆ ಇಲ್ಲಿ ಗೌಡರು ಹೆಚ್ಚು ವಾಸಿಸುತ್ತಿದ್ದರು ಹಾಗಾಗಿ ಗಂಗನವಾಡಿ ಎಂಬ ಹೆಸರಿತ್ತು. ತದನಂತರ ಈ ಊರನ್ನು ನರಸಾಂಬುಧಿ ಕರೆಯಲಾರಂಭಿಸಿದರು. ಈಗಲೂ ಅನೇಕರಿಗೆ ಈ ಊರು ನರಸಾಂಬುಧಿ ಎಂದೇ ಪರಿಚಿತ.
ಬದನವಾಳು ಎಂಬ ಹೆಸರು ಬಂದಿದ್ದು ಹೇಗೆ ?
ದೇವರಿಗೆ ಪರ ಮಾಡುವ ಪದ್ಧತಿಯನ್ನು ಅನೇಕ ದೇವಾಲಯಗಳಲ್ಲಿ ಕಂಡಿರುತ್ತೇವೆ. ಅದೇರೀತಿಯಾಗಿ ಇಲ್ಲಿ ಒಮ್ಮೆ ತಪ್ಪಿಸಿಕೊಂಡು ಬಂದ ಕುರಿಮರಿಯೊಂದನ್ನು ಪರ ಮಾಡುವ ಸಂದರ್ಭದಲ್ಲಿ ಅದರ ಮಾಲೀಕರು ಅಲ್ಲಿಗೆ ಧಾವಿಸುತ್ತಾರೆ. ಆ ಸನ್ನಿವೇಶದಲ್ಲಿ ಜನರಲ್ಲಿ ಅಶಾಂತಿ ವಾತಾವರಣ ಮೂಡದಿರಲಿ ಎಂದು ದೇವರಲ್ಲಿ ಕುರಿಯ ಮಾಂಸವೆಲ್ಲ ಬದನೆಕಾಯಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಆಗ ದೇವರ ಅನುಗ್ರಹದಿಂದ ಬಾಡೆಲ್ಲ ಬದನೆಕಾಯಿಯಾಗಿ ಬದಲಾಗುತ್ತದೆ, ಹಾಗಾಗಿ ಅಂದಿನಿಂದ ಈ ಊರಿಗೆ ಬದನವಾಳು ಎಂದು ಕರೆಯಲಾಗುತ್ತದೆ.
ಒಂದೇ ಒಂದು ಮದ್ಯಾಪನ ಅಂಗಡಿಗಳು ಇಲ್ಲಿಲ್ಲ ಏಕೆ ?
ಬದನವಾಳುವಿನಲ್ಲಿ ತುಂಬಾನೆ ಇತಿಹಾಸವುಳ್ಳ ಘಟನೆಗಳು ನಡೆದಿದೆ. 1930ರ ನಂತರ ಮೊದಲ ಭಾರಿ ರಾಷ್ಟ್ರಪಿತ ಮಹಾತ್ಮಗಾಂಧಿಯವರು ಇಲ್ಲಿಗೆ ಭೇಟಿ ನೀಡಿದ್ದರು. ಏಕೆಂದರೆ ಇಲ್ಲಿ ಖಾದಿ ಉದ್ಯಮವನ್ನು ಕೈಗೊಳ್ಳಾಗಿತ್ತು, ಹಾಗಾಗಿ ಅವರು ಇಲ್ಲಿ ಭೇಟಿ ನೀಡಿದ್ದರು ಎಂಬ ಮಾತಿದೆ. ಈ ಊರಿನ ಒಂದು ವಿಶೇಷತೆ ಏನೆಂದರೆ ಗಾಂಧೀಜಿಯವರು ಬಂದು ಹೋದ ಊರಿದು ಎಂದು ಅಂದಿನಿಂದಲೂ ಈ ಊರಿನಲ್ಲಿ ಯಾವುದೇ ಮದ್ಯಾಪನದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ ಎನ್ನುವ ಮಾಹಿತಿಯಿದೆ.
ಬದನವಾಳು ಸಿದ್ದೇಶ್ವರ ಸ್ವಾಮಿ ಮಹಿಮೆ
ಬದನವಾಳು ಸಿದ್ದೇಶ್ವರ ಸ್ವಾಮಿಯ ಸನ್ನಿಧಿಗೆ ಎಲ್ಲಾ ಜನಾಂಗದ ಜನರು ಭೇಟಿ ನೀಡುವುದು ಇಲ್ಲಿನ ವಿಶೇಷ. ಭಕ್ತಾದಿಗಳು ಸ್ವಾಮಿಯಲ್ಲಿ ಅನೇಕ ರೀತಿಯ ಹರಕೆಗಳನ್ನು ಇಡುತ್ತಾರೆ, ಅನೇಕರಿಗೆ ಮಕ್ಕಳ ಭಾಗ್ಯ ಮತ್ತು ಇತರೆ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಕ್ಕಿದೆ ಎಂಬ ನಂಬಿಕೆಯಿದೆ.
ಬದನವಾಳು ಸಿದ್ದೇಶ್ವರ ಸ್ವಾಮಿ ವಿಶೇಷತೆ
ಬದನವಾಳು ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಸಿದ್ದೇಶ್ವರ, ಶಂಕರೇಶ್ವ ಮತ್ತು ಸಿದ್ದೇಶ್ವರ ತಂಗಿ ದೇವಮ್ಮ ಎಂಬ ದೇವರುಗಳು ನೆಲೆಸಿದ್ದಾರೆ. ಸಿದ್ದೇಶ್ವರ ಸ್ವಾಮಿಯು ದಕ್ಷಿಣಾಭಿಮುಖವಾಗಿ ಮತ್ತು ಶಂಕರೇಶ್ವರ ಸ್ವಾಮಿಯು ಪೂರ್ವ ದಿಕ್ಕಿಗೆ ಮುಖ ಮಾಡಿ ನೆಲೆಸಿದ್ದಾನೆ. ದೇವರಿಗೆ ಸಿಹಿ ಪದಾರ್ಥವೆಂದರೆ ತುಂಬಾನೆ ಇಷ್ಟ ಹಾಗಾಗಿ ದೇವರಿಗೆ ಇಲ್ಲಿ ರಸಾಯನವನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.
ಬದನವಾಳು ಸಿದ್ದೇಶ್ವರ ಸ್ವಾಮಿಗೆ ಭೇಟಿ ನೀಡುವ ಸಮಯ
ಬದನವಾಳು ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಹೆಚ್ಚಿನ ಭಕ್ತಾದಿಗಳು ಭಾನುವಾರದಂದು ಭೇಟಿ ನೀಡುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಪ್ರತಿದಿನವೂ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯವೂ ದೇವರಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಬದನವಾಳು ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಲುಪುವುದು ಹೇಗೆ ?
ಬದನವಾಳು ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನವು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿದೆ.
ಇಲ್ಲಿ ರೈಲು, ಬಸ್ಸು ಅಥವಾ ಸ್ವಂತ ವಾಹನಗಳ ಮೂಲಕವೂ ತಲುಪಬಹುದು.
ಕಾವ್ಯ