ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದು?
ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದು?
ಬೆಂಗಳೂರು: ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿಕೊಂಡು ಏ.26ರಂದು ಜರ್ಮನಿಯ ಮ್ಯೂನಿಕ್ ನಗರಕ್ಕೆ ರಾತ್ರೋರಾತ್ರಿ ಪ್ರಜ್ವಲ್ ಪ್ರಯಾಣ ಬೆಳೆಸಿದ್ದರು. ಅಂದಿನಿಂದ ಬಹಿರಂಗವಾಗಿ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಪ್ರಸ್ತುತ ವಿದೇಶದಲ್ಲಿರುವ ಆರೋಪಿ ಬಂಧನಕ್ಕೆ ಪಾಸ್‌ಪೋರ್ಟ್ ರದ್ದತಿಗೆ ಮುಂದಾದ ಎಸ್‌ಐಟಿ, ಈ ಸಂಬಂಧ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಇದಕ್ಕೂ ಮೊದಲು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ಮನವಿ ಮೇರೆಗೆ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಈ ವಾರಂಟ್ ಆಧರಿಸಿ ಆರೋಪಿ ಪತ್ತೆಗೆ ಸಹಕರಿಸುವಂತೆ ಕೋರಿ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿದ ಬೆನ್ನಲ್ಲೇ ವಿದೇಶದಲ್ಲಿ ಅಜ್ಞಾತವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿ ವಿದೇಶಾಂಗ ಇಲಾಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಸೋಮವಾರ ಪತ್ರ ಬರೆದಿದೆ.ಈ ಮನವಿಗೆ ಮೇರೆಗೆ ಪ್ರಜ್ವಲ್ ಅವರ ಪಾಸ್‌ಪೋರ್ಟ್ ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದರೆ ತಕ್ಷಣವೇ ಅವರು ಸ್ವದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲದೆ ಹೋದರೆ ವಿದೇಶದಲ್ಲಿ ನಿರಾಶ್ರಿತ ಎಂದು ಹೇಳಿ ಆಶ್ರಯ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಕಾನೂನು ಚೌಕಟ್ಟಿನಲ್ಲಿ ಎಸ್‌ಐಟಿ ಹುರಿ ಬಿಗಿಗೊಳಿಸಿದ್ದು, ಸಂಸದಗೆ ಮತ್ತಷ್ಟು ಸಂಕಷ್ಟ ಸೃಷ್ಟಿಯಾಗಿದೆ.
ಈ ಸುದ್ದಿ ಓದಿದ್ದೀರಾ: ಫೈನ್ ಹಾಕಿದ್ದಕ್ಕೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ರು!