ಕಂಬಳ ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
ಕಂಬಳ ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
ತುಳು ನಾಡಿನ ಜಾನಪದ ಕ್ರೀಡೆ ಕಂಬಳದ ಅಭಿಮಾನ ಕರಾವಳಿಯಲ್ಲಿ ಇತ್ತೀಚಿನ ಕಾಲಘಟ್ಟದಲ್ಲಿ ಮತ್ತೆ ಹೆಚ್ಚಾಗುತ್ತಿದೆ. ಪುಟಾಣಿಗಳಿಂದ ತೊಡಗಿ ಹಿರಿಯರ ವರೆಗೆ ಎಲ್ಲರಲ್ಲೂ ಕಂಬಳದ ಆಸಕ್ತಿ ಕಾಣಿಸುತ್ತಿದೆ; ಇದಕ್ಕೆ ಬಲ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಕಂಬಳದ ಕೋಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ!
ಅದರಲ್ಲಿಯೂ ಸೀನಿಯರ್ (6 ವರ್ಷ ಮೀರಿದ) ಹಾಗೂ ಜೂನಿಯರ್(ಮೂರರಿಂದ 6 ವರ್ಷ) ಹೊರತುಪಡಿಸಿ ಸಬ್ ಜೂನಿಯರ್ (3 ವರ್ಷದ ಒಳಗಿನ) ಸಣ್ಣ ಕೋಣಗಳನ್ನು ಸಾಕುವವರ ಸಂಖ್ಯೆ ಇತ್ತೀಚೆಗೆ ಏರಿಕೆ ಕಂಡಿದೆ ಎಂಬುದು ಗಮನೀಯ ಅಂಶ.
ಸಣ್ಣ ಪ್ರಾಯದ ಕೋಣಗಳಿಗೆ ಕಂಬಳ ಕರೆಯ ಓಟ ಸರಿಯಾ? ತಪ್ಪಾ? ಎಂಬ ವಿಮರ್ಶೆ ಚಾಲ್ತಿಯಲ್ಲಿದ್ದರೂ ಕೋಣಗಳ ಬಗೆಗೆನ ಅಪ್ಯಾಯಮಾನವಾದ ಪ್ರೀತಿಹಾಗೂ ಕಂಬಳದ ಕುರಿತ ಆಸಕ್ತಿ ತುಳುನಾಡಿನ ಬಹುತೇಕ ಮನೆಯಲ್ಲಿ ಜಾಗೃತವಾ ಗುತ್ತಿರುವ ಕಾರಣದಿಂದ ಕೋಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುವಂತಾಗಿದೆ.
40 ವರ್ಷಗಳ ಹಿಂದೆಯೂ ಕೋಣಗಳ ಸಂಖ್ಯೆ ಅಧಿಕವಿತ್ತು. ಒಂದು ಊರಿನಲ್ಲೇ 50 ಜತೆ ಕೋಣಗಳು ಇದ್ದವು. ಅಂದರೆ 2 ಜಿಲ್ಲೆಯಲ್ಲಿ ಸಾವಿರಾರು ಕೋಣಗಳಿದ್ದವು. ಆದರೆ ಗದ್ದೆ ಉಳುಮೆಗೆ ಯಂತ್ರದ ಆಗಮನ ಆಗುತ್ತಿದ್ದಂತೆ ಕೋಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಯಿತು. ಈಗ ಮತ್ತೆ ಕಂಬಳ ಅಭಿಮಾನ ಇಮ್ಮಡಿಯಾದ ಕಾರಣ ಕೋಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣಲಾಗುತ್ತಿದೆ. ಸಾವಿರಾರು ಕಂಬಳ ಕೋಣಗಳು ಈಗ ಕರೆಗೆ ಇಳಿಯಲು ಪರಿಪಕ್ವವಾಗಿವೆ. ಇತ್ತೀಚೆಗಿನ ಸಬ್‌ಜೂನಿಯರ್ ವಿಭಾಗದ ಕಂಬಳದಲ್ಲಿ 278 ಜತೆ ಕೋಣ ಭಾಗವಹಿಸಿದ್ದು ವಿಶೇಷ.