• 18 ಅಕ್ಟೋಬರ್ 2024

ಶ್ರೀ ಗುರು ರಾಯರಿದ್ದಾರೆ….

 ಶ್ರೀ ಗುರು ರಾಯರಿದ್ದಾರೆ….
Digiqole Ad

ಶ್ರೀ ರಾಘವೇಂದ್ರಸ್ವಾಮಿಗಳ ಪ್ರಥಮಾವತಾರ ಭಕ್ತಪ್ರಹ್ಲಾದನಾಗಿದ್ದಾಗ ಶ್ರೀನರಸಿಂಹದೇವರನ್ನು ಪ್ರತ್ಯಕ್ಷಮಾಡಿಕೊಂಡರು.

ಶ್ರೀ ರಾಘವೇಂದ್ರಸ್ವಾಮಿಗಳು ಪ್ರಥಮ ಅವತಾರದಲ್ಲಿ ದೈತ್ಯಕುಲೋದ್ಧಾರಕನಾದ ಭಕ್ತಿಯ ಸಾಕಾರರೂಪನಾದ ಪ್ರಹ್ಲಾದರಾಗಿ ಅವತಾರ ಮಾಡಿದರು. ಭಕ್ತಿ ಎಂದರೆ ಏನು? ಅದರ ಪ್ರಭಾವ ಹೇಗಿರುತ್ತದೆ ಎಂದು ಸಕಲ ಸಜ್ಜನಸಮೂಹಕ್ಕೆ ತೋರಿಸಿಕೊಟ್ಟರು. ತಾವು ಗರ್ಭದಲ್ಲಿರುವಾಗಲೇ ಶ್ರೀಹರಿಯ ಪರಮಭಕ್ತರಾದ ಶ್ರೀನಾರದಮಹರ್ಷಿಗಳಿಂದ ಉಪದೇಶ ಹೊಂದಿದರು. ಅಂತಹ ದೃಢವಾದ ಭಕ್ತಿ ಇದ್ದುದರಿಂದಲೇ ತಂದೆಯಾದ ಹಿರಣ್ಯಕಶಿಪುವು ಸಮುದ್ರದಲ್ಲಿ ಮುಳುಗಿಸಿದರೂ, ಪರ್ವತಾಗ್ರದಿಂದ ಎತ್ತಿಹಾಕಿದರೂ, ಅಗ್ನಿಯಲ್ಲಿ ಹಾಕಿ ಭಸ್ಮಮಾಡಲು ಪ್ರಯತ್ನಿಸಿದರೂ, ಕ್ರೂರಮೃಗಗಳ ಬೋನಿನೊಳಗೆ ಬಿಟ್ಟರೂ, ಮಹಾವಿಷ ಸರ್ಪಗಳಿಂದ ಕಚ್ಚಿಸಿ ಕೊಲ್ಲಲು ಪ್ರಯತ್ನಿಸಿದರೂ, ಪ್ರಹ್ಲಾದನನ್ನು ಕೊಲ್ಲಲು ಶಕ್ತನಾಗಲಿಲ್ಲ. ಕೊನೆಗೆ ರೋಸಿ ಹೋಗಿ ಮಹಾವಿಷವನ್ನು ತಾಯಿಯಿಂದಲೇ ಕುಡಿಸುವಂತೆ ಆ ದೈತ್ಯನು ಆಜ್ಞೆ ಮಾಡಿದನು. ಆ ಮಹಾಗರಳ ಕೂಡಾ ಶ್ರೀಹರಿಯ ಅನುಗ್ರಹದಿಂದ ಪ್ರಹ್ಲಾದನನ್ನು ಏನು ಮಾಡಲು ಶಕ್ಯವಾಗಲಿಲ್ಲ. ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಸಭೆಯಲ್ಲಿ ದಂಡಿಸಬೇಕೆಂದು ಗಟ್ಟಿಯಾಗಿ ಹಿಡಿದುಕೊಂಡವನಾಗಿ ಆ ನಿನ್ನ ಹರಿ ಎಲ್ಲೆಲ್ಲೂ ಇರುವುದಾದರೆ ಈ ಕಂಭದಿಂದ ಬಂದು ನಿನ್ನನ್ನು ರಕ್ಷಿಸಲಿ ಎಂದು ಕಂಭವನ್ನು ಕಾಲಿನಿಂದ ಒದ್ದಾಗ, ಪ್ರಹ್ಲಾದನ ಕರೆಗಾಗಿ ಕಾದಿದ್ದ ಶ್ರೀಹರಿಯು ಅವನ ಉದ್ದಾರ ಮಾಡುವ ಸಲುವಾಗಿ ಅರ್ಧಮನುಷ್ಯ ಅರ್ಧಮೃಗರೂಪದಿಂದ ತಾನು ಎಲ್ಲಕಡೆ ಇದ್ದು ಭಕ್ತರು ಕರೆದರೆ ಬರುವೆನು ಎಂದು ತೋರಸುವ ಸಲುವಾಗಿ ನರಸಿಂಹರೂಪನಾಗಿ ಕಂಭದಿಂದ ಹೊರಬಂದನು. ಪ್ರಹ್ಲಾದನಿಗಾಗಿ ಅವನ ತಂದೆ ಮಹಾ ದೈತ್ಯನಾದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆದು ಸಂಹಾರ ಮಾಡಿದನು. ಈ ಪ್ರಹ್ಲಾದನಂತಹ ಭಕ್ತರು ಇನ್ನು ಎಷ್ಟು ಮಂದಿ ಇವರ ಹೊಟ್ಟೆಯಲ್ಲಿ ಇದ್ದಾರೋ ನೋಡೋಣ ಎಂದು ನರಸಿಂಹರೂಪನಾದ ಶ್ರೀಹರಿಯು ಹಿರಣ್ಯಕಶಿಪುವಿನ ಹೊಟ್ಟೆಯನ್ನು ಸೀಳಿದನೆನೋ ಅನ್ನುವಂತಿತ್ತು ಆ ದೃಶ್ಯ. ಹೀಗೆ ಶ್ರೀಹರಿಯನ್ನು ನೆನೆಯುತ್ತಾ ಭಕ್ತಿಯಿಂದ ಮೈಮರೆತು ಶ್ರೀಪ್ರಹ್ಲಾದರಾಜರು ಭಕ್ತಿಮಾರ್ಗದಲ್ಲಿ ನಡೆದುದಲ್ಲದೆ ಎಲ್ಲರನ್ನೂ ಆ ದಾರಿಯಲ್ಲಿ ನಡೆಸಿ ತಾವು ಮಾಡಿಕೊಂಡ ಶ್ರೀಹರಿಯ ಸಾಕ್ಷಾತ್ಕಾರವನ್ನು ಸಂಸಾರ ಸಾಗರದಲ್ಲಿ ಬಿದ್ದು ನರಳುತ್ತಾ ಮುಳುಗುತ್ತಿರುವ ಸಜ್ಜನರಿಗೂ ಮಾಡಿಸಿದರು. ಎಲ್ಲರನ್ನೂ ಹರಿಕೃಪೆ ಪಡೆಯುವಂತೆ ಭಕ್ತಿಮಾರ್ಗದಲ್ಲಿ ನಡೆಸಿದರು. ಹರಿದ್ವೇಷಿಯಾದರೂ ತಂದೆ ಹಿರಣ್ಯಕಶಿಪುವಿನ ತಪ್ಪನ್ನು ಮನ್ನಿಸುವಂತೆ

Raghavendra

ಪ್ರಾರ್ಥಿಸಿ ಶ್ರೀನರಹರಿಯಿಂದ ತಮ್ಮ ತಂದೆಯನ್ನೇ ಉದ್ದಾರ ಬಯಸಿದರು. ಯಾವಾಗಲೂ ದುಷ್ಟವರ್ತನೆಯಲ್ಲೇ ತೊಡಗಿ ಕುಮಾರ್ಗಗಾಮಿಗಳಾದ ದೈತ್ಯರ ಸಮೂಹದಲ್ಲಿ ಹುಟ್ಟಿ ಬಂದು ಭಕ್ತಿಮಾರ್ಗದಿಂದ ಅವರನ್ನೆಲ್ಲಾ ಉದ್ಧಾರ ಮಾಡಿದರು. ಇದ್ದರೆ ಇಂತಹ ಮಕ್ಕಳಿರಬೇಕು. ಚಿಕ್ಕಬಾಲಕನಾದರೂ ಪ್ರಹ್ಲಾದನು ಭಕ್ತಿಯ ಪ್ರತಿರೂಪ ಎಂಬ ಪ್ರಶಸ್ತಿ ಪಡೆದನು.

ಮುಂದುವರೆಯುವುದು……….

ಲೇಖಕರು

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ