ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ : ಭಕ್ತನಿಗಾಗಿ ಇಟ್ಟಿಗೆಯ ಮೇಲೆ ನಿಂತ ಭಗವಂತನ ಕಥೆ!
ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ : ಭಕ್ತನಿಗಾಗಿ ಇಟ್ಟಿಗೆಯ ಮೇಲೆ ನಿಂತ ಭಗವಂತನ ಕಥೆ!
ಒಂದು ಕಾಲಕ್ಕೆ ಕರ್ನಾಟಕದ ಭಾಗವಾಗಿದ್ದ ಮತ್ತು ಈಗಲೂ ಕನ್ನಡಿಗರೇ ಹೆಚ್ಚಾಗಿರುವ, ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಭಾಗವಾಗಿರುವ ಸೊಲ್ಲಾಪುರ ಜಿಲ್ಲೆಯ ಭೀಮಾ ನದಿಯ ತಟದಲ್ಲಿರುವ ಹಿಂದೂಗಳ ಪವಿತ್ರ ಶ್ರೀಕ್ಷೇತ್ರವೇ ಪಂಢರಾಪುರವಾಗಿದ್ದು ಅಲ್ಲಿ ಪ್ರಭು ಪಾಂಡುರಂಗ ವಿಠ್ಥಲ ಇಟ್ಟಿಕೆಯ ಮೇಲೆ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ. ಪಂಢರಾಪುರದಲ್ಲಿ ಭೀಮಾ ನದಿಯು ಅರ್ಧಚಂದ್ರಾಕಾರದಲ್ಲಿ ಹರಿಯುವುದರಿಂದ ಅದನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರಲ್ಲದೇ, ಆಶಾಢ ಮಾಸದ ಏಕಾದಶಿಯಂತೆ ಅಲ್ಲಿ ನಡೆಯುವ ಯಾತ್ರೆಯಲ್ಲಿ ದೇಶವಿದೇಶಗಳಿಂದ ಸುಮಾರು 5-6 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ರುಕ್ಮಿಣಿ ಸಮೇತ ಪಾಂಡುರಂಗನ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ವಿಠ್ಠ ಎಂದರೆ, ಇಟ್ಟಿಗೆ ಎಂದರ್ಥ. ಭಗವಾನ್ ಶ್ರೀಕೃಷ್ಣ ಇಲ್ಲಿ ಇಟ್ಟಿಗೆ ರೂಪದ ಆಯತರಾಕಾರದ ಕಲ್ಲಿನ ಮೇಲೇ ಒಂದೇ ಕಾಲಿನ ಮೇಲೆ ನಿಂತಿರುವ ಕಾರಣ ಶ್ರೀಕೃಷ್ಣನನ್ನು ವಿಠ್ಠಲ ಎಂದು ಕರೆಯಲಾಗುತ್ತದೆ, ಆದೇ ರೀತಿ ಅವನು ದ್ವಾರಕಾದಿಂದ ಪಂಢರಪುರಕ್ಕೆ ಬಂದಾಗ ಕಪ್ಪಾಗಿದ್ದರೂ ಅವನ ಮುಖದ ಮೇಲೆ ಬಿಳಿ ಮರಳು ಇದ್ದದ್ದರಿಂದ ಪಾಂಡ್ರ-ರಂಗ (ಪಾಂಡುರಂಗ) ಎಂದು ಕರೆಯುತ್ತಾರೆ.
ಇಲ್ಲಿ ಭಗವಾನ್ ಶ್ರೀಕೃಷ್ಣ ಸೊಂಟದ ಮೇಲೆ ಕೈ ಇಟ್ಟುಕೊಂಡು ಇಟ್ಟಿಗೆಯ ಮೇಲೆ ನಿಂತು ಕೊಂಡಿರುವ ಹಿಂದೆಯೂ ಒಂದು ರೋಚವಾದ ಕಥೆ ಇದೆ.
ಬಹಳ ಹಿಂದೆ, ಪುಂಡಲೀಕ ಎಂಬ ಭಕ್ತನೊಬ್ಬ ತನ್ನೂರಿಂದ ಕಾಶಿಗೆ ಹೋಗುವ ಮಾರ್ಗದಲ್ಲಿ ಕುಕ್ಕುಟ ಎಂಬ ಋಷಿ ಆಶ್ರಮವನ್ನು ತಲುಪಿ, ಅವರ ಬಳಿ ಕಾಶಿಗೆ ಹೋಗುವ ದಾರಿಯನ್ನು ಕೇಳುತ್ತಾನೆ. ತಾನು ಕಾಶಿಗೆ ಎಂದೂ ಹೋಗದ ಕಾರಣ ತನಗೆ ಕಾಶಿಯ ದಾರಿ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಕುಕ್ಕುಟ ಋಷಿಗಳು ಹೇಳಿದಾಗ, ಪುಂಡಲೀಕನು ದರ್ಪದಿಂದ ನಿಮ್ಮಂತಹ ಋಷಿಮುನಿಗಳು ಇಷ್ಟು ಹೊತ್ತಿಗೆ ಕಾಶಿಗೆ ಭೇಟಿ ನೀಡಬೇಕಿತ್ತಲ್ಲವೇ? ಎಂದು ಹಂಗಿಸುತ್ತಾನೆ. ಋಷಿಗಳು ಪುಂಡಲೀಕನಿಗೆ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾರೆ.
ಅಶ್ರಮದಲ್ಲಿ ಆ ರಾತ್ರಿ ತಂಗಿದ್ದು ಗಾಢ ನಿದ್ರೆಯಲ್ಲಿದ್ದ ಪುಂಡಲೀಕನಿಗೆ ಇದ್ದಕ್ಕಿದ್ದಂತಯೇ ಕೆಲವು ಮಹಿಳೆಯರ ಧ್ವನಿಯಿಂದಾಗಿ ಎಚ್ಚರವಾದಾಗ, 3 ಮಹಿಳೆಯರೂ ಆಶ್ರಮದ ಕಸ ಗುಡಿಸಿ ನೀರನ್ನು ಚಿಮುಕಿಸಿ ಶುಚಿಗೊಳಿಸುತ್ತಿದ್ದುದನ್ನು ಕಂಡು ಕುತೂಹಲದಿಂದ ಅ ಮೂವರು ಮಹಿಳೆಯರು ಯಾರು ಎಂದು ವಿಚಾರಿಸಿದಾಗ, ಅವರು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ಆಗಿದ್ದು ಅವರು ಪ್ರತಿದಿನವೂ ಕುಕ್ಕುಟ ಋಷಿಗಳ ಆಶ್ರಮವನ್ನು ಸ್ವಚ್ಛಗೊಳಿಸುವ ವಿಷಯ ಕೇಳಿದಾಗ ಕುಕ್ಕುಟ ಋಷಿಗಳ ಶಕ್ತಿ ಸಾಮರ್ಥ್ಯದ ಅರಿವಾಗಿ ಅಂತಹವರನ್ನು ಅವಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದಾಗ, ಧಾರ್ಮಿಕತೆ, ಆಧ್ಯಾತ್ಮಿಕತೆ ಮತ್ತು ಭಕ್ತಿಯು ಕೇವಲ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದರಿಂದಾಗಲೀ, ಅಥವಾ ಆಡಂಬರದ ಆಚರಣೆಗಳನ್ನು ಅವಲಂಬಿಸಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ಮವನ್ನು ಸರಿಯಾಗಿ ನಿರ್ವಹಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
ಋಷಿ ಕುಕ್ಕುಟರು ತಮ್ಮ ಹೆತ್ತವರ ಅಂತಿಮ ದಿನಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ, ಪರಮ ನೇಮ ನಿಷ್ಠೆಯಿಂದ ಅವರ ಶುಶ್ರೂಷೆ ಮಾಡುವುದಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟ ಕಾರಣ ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋಗದಿದ್ದರೂ, ಅಲ್ಲಿಗೆ ಹೋದಾಗ ದೊರಯಬಹುದಾದಷ್ಟು ಮೋಕ್ಷವನ್ನು ಗಳಿಸಿರುವ ಕಾರಣ, ಅಂತಹವರ ಸೇವೆಗೆಂದು ನಾವು ಇಲ್ಲಿಗೆ ಬಂದು ಅವರ ಸೇವೆ ಮಾಡುತ್ತಿದ್ದೇವೆ ಎಂದು ತಿಳಿಸುತ್ತಾರೆ.
ಆ ಮೂವರು ಮಹಿಳೆಯರ ಮಾತನ್ನು ಕೇಳಿದ ಪುಂಡಲೀಕನಿಗೆ ತನ್ನ ವೃದ್ಧ ತಂದೆ ತಾಯಿಯನ್ನು ಮನೆಯಲ್ಲಿ ಬಿಟ್ಟು ಮೋಕ್ಷವನ್ನು ಸಂಪಾದಿಸುವ ಸಲುವಾಗಿ ತಾನೊಬ್ಬನೇ ಕಾಶಿಗೆ ಹೋಗುತ್ತಿರುವುದಕ್ಕೆ ತನ್ನ ಮೇಲೆಯೇ ಅಸಹ್ಯವುಂಟಾಗಿ ಕುಕ್ಕುಟ ಋಷಿಗಳಿಗೆ ವಂದಿಸಿ, ಆ ಕೂಡಲೇ ತನ್ನ ಮನೆಗೆ ಹಿಂದಿರುಗಿ ತನ್ನ ಹೆತ್ತವರೊಡನೆ ಕಾಶಿ ವಿಶ್ವೇಶ್ವರನ ದರ್ಶನ ಪಡೆದ ನಂತರ ತನ್ನ ವಯೋವೃದ್ಧ ಪೋಷಕರ ಸೇವೆಗಾಗಿ ತನ್ನ ಸಂಪೂರ್ಣ ಸಮಯವನ್ನು ಮೀಸಲಿಟ್ಟು ಅತ್ಯಂತ ಜತನದಿಂದ ತನ್ನ ತಂದೆ ತಾಯಿಯರ ಸೇವೆಯನ್ನು ಮಾಡುತ್ತಿದ್ದದ್ದನ್ನು ಕಂಡ ಶ್ರೀ ಕೃಷ್ಣನಿಗೆ ಪುಂಡಲೀಕನನ್ನು ಪರೀಕ್ಷಿಸುವ ಸಲುವಾಗಿ ಗೋಪಾಲನ ವೇಷದಲ್ಲಿ ಅವನ ಮನೆಗೆ ಬಂದು ಬಾಗಿಲನ್ನು ಬಡಿಯುತ್ತಾನೆ.
ಆ ಸಮಯದಲ್ಲಿ ಪ್ರಾಮಾಣಿಕವಾಗಿ ತನ್ನ ಹೆತ್ತವರ ಸೇವೆಯನ್ನು ಮಾಡುತ್ತಿದ್ದ ಪುಂಡಲೀಕನು ಗೋಪಾಲ ವೇಷದಲ್ಲಿರುವನು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ ಎಂದು ಅರಿಯದೇ, ನಾನು ಈಗ ನಮ್ಮ ತಂದೆ ತಾಯಿಯ ಸೇವೆಯಲ್ಲಿ ನಿರತನಾಗಿರುವ ಕಾರಣ, ಈಗ ನಿನ್ನನ್ನು ಭೇಟಿ ಮಾಡಲು ಆಗುತ್ತಿಲ್ಲವಾದ್ದರಿಂದ ದಯವಿಟ್ಟು ನನಗಾಗಿ ಕಾಯಲು ಸಾಧ್ಯವೇ? ಎಂದಾಗ, ಸರಿ ಹಾಗಾದರೆ ನೀನು ಕರೆಯುವವರೆಗೂ ನಾನು ಎಲ್ಲಿರಲಿ? ಎಂದು ಭಗವಂತ ಕೇಳಿದಾಗ, ಅಲ್ಲೇ ಕಣ್ಣಿಗೆ ಕಾಣಿಸಿದ ಇಟ್ಟಿಗೆಯೊಂದನ್ನು ಅವನ ಬಳಿ ದೂಡುತ್ತಾನೆ. ಆಗ ಭಗವಂತನು ಪುಂಡಲೀಕನ ಮನೆಯ ಬಾಗಿಲಲ್ಲೇ ಇಟ್ಟಿಗೆಯ ಮೇಲೆಯೇ ಸೊಂಟದ ಮೇಲೆ ಕೈಯ್ಯನ್ನಿಟುಕೊಂಡು ಒಂದೇ ಕಾಲಿನ ಮೇಲೆ ನಿಂತು ಪುಂಡಲೀಕ ತನ್ಫ ಹೆತ್ತವರ ಸೇವೆಯನ್ನು ಮಾಡುತ್ತಿರುವುದನ್ನೇ ಆನಂದದಿಂದ ನೋಡುತ್ತಲೇ ಪುಂಡಲೀಕನ ಆಗಮನಕ್ಕಾಗಿಯೇ ತಾಳ್ಮೆಯಿಂದ ಕಾಯತೊಡಗುತ್ತಾನೆ.
ತನ್ನ ತಂದೆತಾಯಿರು ನಿದ್ದೆಗೆ ಜಾರಿದ ನಂತರ ತನ್ನನ್ನು ನೋಡಲು ಬಂದವರು ಯಾರು? ಎಂದು ಮನೆಯಿಂದ ಹೊರಬಂದು ನೋಡಿದಾಗ ಸಾಕ್ಷತ್ ಶ್ರೀ ಕೃಷ್ಣನೇ ತನ್ನ ಮನೆಯ ಮುಂದೆ ನಿಂತಿರುವುದನ್ನು ನೋಡಿ ತನ್ನನ್ನೇ ತಾನು ನಂಬಲಾಗದೇ, ಅಜ್ಞಾನದಿಂದ ಅಷ್ಟು ಹೊತ್ತು ಭಗವಂತನನ್ನು ಕಾಯುವಂತೆ ಮಾಡಿದ್ದಕ್ಕಾಗಿ ಕ್ಷಮೆಯನ್ನು ಕೇಳಿದಾಗ, ಅದರಿಂದ ಸಂತೃಷ್ಟನಾದ ಭಗವಂತ ನಿನಗೆ ಇಷ್ಟವಾದ ವರವನ್ನು ಕೇಳಿಕೋ ಎಂದಾಗ, ಬಯಸದೇ ಭಗವಂತನೇ ನನ್ನ ಮನೆಯ ಬಾಗಿಲಿಗೆ ಬಂದಿರುವಾಗ ಇದಕ್ಕಿಂತಲೂ ಹೆಚ್ಚಿನದ್ದನ್ನು ಬಯಸುವುದಿಲ್ಲ ಎಂದಾಗ,
ಭಗವಂತನೇ ಬಲವಂತ ಮಾಡಲು, ತನಗೆ ಸಿಕ್ಕಿದ ಭಗವಂತನ ದರ್ಶನದ ಭಾಗ್ಯ ಎಲ್ಲರಿಗೂ ಸಿಗುವಂತಾಗಲು, ಭಗವಂತನನ್ನು ಶಾಶ್ವತವಾಗಿ ಅಲ್ಲಿಯೇ ನೆಲೆಸುವಂತೆ ಕೋರಿಕೊಂಡಾಗ. ಅದಕ್ಕೊಪ್ಪಿದ ಶ್ರೀ ಕೃಷ್ಣ ಇಟ್ಟಿಗೆಯ ಮೇಲೆಯೇ ನಿಂತು ವಿಠ್ಠಲ ಎಂಬ ನಾಮಾಂಕಿತನಾಗುತ್ತಾನೆ.
ವಿಷ್ಣು ಮತ್ತು ಪುಂಡಲೀಕ ಭೇಟಿಯಾದ ಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಅತ್ತ ದ್ವಾರಕೆಯಲ್ಲಿದ್ದ ರುಕ್ಮಿಣಿಯೂ ಎಷ್ಟು ದಿನಗಳಾದರೂ ಶ್ರೀ ಕೃಷ್ಣನು ಹಿಂದಿರುಗದೇ ಹೋದಾಗ, ಅವನನ್ನು ಹುಡುಕಿಕೊಂಡು ಪಂಢರಾಪುರಕ್ಕೆ ಬಂದು ತಾನೂ ಸಹಾ ಶ್ರೀಕೃಷ್ಣನ ಜೊತೆ ಶಾಶ್ವತವಾಗಿ ಅಲ್ಲೇ ನೆಲೆಗೊಳ್ಳುತ್ತಾಳೆ. ಇಂದಿಗೂ ಸಹಾ ದೇವಾಲಯದ ಒಳಗೆ ಇಟ್ಟಿಗೆಯ ಮೇಲೆ ಕೃಷ್ಣನ ವಿಗ್ರಹವಿದ್ದು ಅವನ ಪಕ್ಕದಲ್ಲೇ ರುಕ್ಮಿಣಿಯ ವಿಗ್ರಹವೂ ಇರುವುದನ್ನು ಕಾಣಬಹುದಾಗಿದೆ.
ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಆದರಲ್ಲೂ ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆಯಲ್ಲಿ ಭಗವಂತನ ಭಜನೆಯನ್ನು ಮಾಡಿಕೊಂಡು ಬಂದು ಇಲ್ಲಿನ ನದಿಯಲ್ಲಿ ಮಿಂದು ಭಗವಂತನ ದರ್ಶನ ಪಡೆದು ಪುನೀತರಾಗುತ್ತಾರೆ. ಈ ರೀತಿಯ ಕಾಲ್ನಡಿಯ ಯಾತ್ರೆಗೆ 13ನೇ ಶತಮಾನದಷ್ಟು ಹಳೆಯ ಇತಿಹಾಸವಿದ್ದು ಇದಕ್ಕೆ ವಾರ್ಕರಿ ಸಂಪ್ರದಾಯ ಎಂದು ಕರೆಯಲಾಗುತ್ತದೆ. ಸಂತ ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಮುಂತಾದ ಸಂತರು ಇದೇ ಈ ಸಂಪ್ರದಾಯದಲ್ಲಿ ಬೆಳೆದು ಬಂದ ಪ್ರಮುಖರಾಗಿದ್ದಾರೆ. ಇಂದಿಗೂ ಈ ಸಂತರ ಹೆಸರಿನ ವಾರ್ಕರಿಗಳು ಪಂಢರಪುರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ಆಗಮಿಸುತ್ತವೆ.
ಸಂತ ತುಕಾರಾಮರ ಮಗ ನಾರಾಯಣ ಮಹಾರಾಜರು 1685ರಲ್ಲಿ ಈ ಪಲ್ಲಕ್ಕಿಗಳಲ್ಲಿ ಸಂತರ ಪಾದುಕೆಗಳನ್ನು ಇಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಹಾಗಾಗಿ ಆಷಾಡ ಮಾಸ ಆರಂಭ ಆಗುತ್ತಿದ್ದಂತೆಯೇ, ಕರ್ನಾಟಕದ ಅಳಂದದಿಂದ ಜ್ಞಾನೇಶ್ವರ ಮಹಾರಾಜ ಭಕ್ತರು, ದೇಹುದಿಂದ ತುಕಾರಾಮರ ಭಕ್ತರು, ಪೈಠಣದಿಂದ ಏಕನಾಥರ ಭಕ್ತರು, ತ್ರಯಂಬಕೇಶ್ವರದಿಂದ ನಿವೃತ್ತಿನಾಥರ ಭಕ್ತರು, ಮುಕ್ತಿನಗರದಿಂದ ಮುಕ್ತಾಬಾಯಿ ಭಕ್ತರು, ಶೇಗಾಂವದಿಂದ ಗಜಾನನ ಮಹಾರಾಜರ ಭಕ್ತರು, ಸಾಸವಾಡದಿಂದ ಸೋಪಾನ ಮಹಾರಾಜರ ಭಕ್ತರು ಹೀಗೆ ನಾನಾ ಸ್ಥಳಗಳಿಂದ ಸುಮಾರು 40ಕ್ಕೂ ಹೆಚ್ಚಿನ ಪಲ್ಲಕ್ಕಿಗಳನ್ನು ಹೊತ್ತು ಪಾದಯಾತ್ರೆಯ ಶೋಭಾಯಾತ್ರೆಯ ಮೂಲಕ ಆಷಾಢ ಶುದ್ಧ ಏಕಾದಶಿಗೆ ಸರಿಯಾಗಿ ಪಂಢರಾಪುರಕ್ಕೆ ತಲುಪುತ್ತಾರೆ..
ಇನ್ನು ವಾರಕರಿ ಸಂಪ್ರದಾಯದಲ್ಲಿ ರಿಂಗಣ ಮತ್ತು ಧಾವಾ ಎಂಬ ಎರಡು ರೀತಿಯ ಆಚರಣಾ ಪದ್ದತಿಗಳಿದ್ದು, ಪಂಢರಾಪುರದಿಂದ 14 ಕಿ.ಮೀ.ದೂರದಲ್ಲಿರುವ ಬಂಡಿಸೇಗಾಂವ ಗ್ರಾಮದಲ್ಲಿ ಭಕ್ತಾದಿಗಳು ವೃತ್ತವೊಂದನ್ನು ನಿರ್ಮಿಸಿ, ಅದರ ಮಧ್ಯೆ ಕುದುರೆಯೊಂದರ ಮೇಲೆ ಸಂತರ ಪಾದುಕೆಗಳನ್ನಿಟ್ಟು ವೃತ್ತಾಕಾರದಲ್ಲಿ ಓಡುವ ಕುದುರೆ ಹಿಂದೆ ಅವರೂ ಸಾಗುತ್ತಾರೆ. ಹೀಗೆ ಕುದುರೆ ಓಡುವಾಗ ಅದರ ಕಾಲಿನಿಂದ ಬರುವ ಧೂಳನ್ನು ಸಂತರ ಪಾದದ ಧೂಳು ಎಂಬು ನಂಬಿಕೆಯಿಂದ ಹಣೆಗೆ ಹಚ್ಚಿಕೊಳ್ಳುತ್ತಾರೆ. ಈ ರೀತಿಯ ಪದ್ದತಿಗೆ ರಿಂಗಣ ಎನ್ನುತ್ತಾರೆ.
ಇನ್ನು ವಿವಿಧ ಸ್ಥಳಗಳಿಂದ ಪಾದಯಾತ್ರೆ ಹೊರಟು ಪಂಢರಾಪುರದಿಂದ 25 ಕಿ.ಮೀ. ದೂರದಲ್ಲಿರುವ ಬೋಂಡ್ಲೆ ಗ್ರಾಮ ತಲುಪಿದ ಕೂಡಲೇ, ಪಾದಯಾತ್ರಿಗಳ ವೇಗ ಹೆಚ್ಚುತ್ತದೆ. ದೇವರು ದರ್ಶನ ನೀಡಲು ತಮಗಾಗಿ ಕಾಯುತ್ತಾ ನಿಂತಿದ್ದಾನೆ ಎಂಬ ಭಕ್ತಿಯ ಉನ್ಮಾದದಲ್ಲಿ ಭಕಾದಿಗಳು ಓಡೋಡುತ್ತಾ, ಪಂಢರಾಪುರ ತಲುಪಿ ಈ ರೀತಿಯಾಗಿ ವಿಠ್ಠಲನ ದರ್ಶನ ಪಡೆಯುವುದನ್ನು ಧಾವಾ ಎನ್ನುತ್ತಾರೆ. ಹೀಗೆ ಓಡುತ್ತಾ. ಮೊದಲು ಪಂಢರಪುರ ತಲುಪುವ ವಾರ್ಕರಿ ತಂಡದ ಮುಖ್ಯಸ್ಥರನ್ನು ಆಷಾಢ ಶುದ್ಧ ಏಕಾದಶಿ ದಿನದಂದು ನಡೆಯುವ ವಿಶೇಷ ಪೂಜೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಪೂಜೆ ಸಲ್ಲಿಸುವ ಹೊಸಾ ಸಂಪ್ರದಾಯವನ್ನು 1996 ರಿಂದ ನಡೆಸಿಕೊಂಡು ಬಂದಿರುವ ಕಾರಣ, ಈ ಅವಕಾಶಕ್ಕಾಗಿ ವಾರ್ಕರೀ ತಂಡಗಳಲ್ಲಿ ಆರೋಗ್ಯಕರ ಪೈಪೋಟಿ ಏರ್ಪಟ್ಟಿರುತ್ತದೆ.
ಹೀಗೆ ದೇಶದ ವಿವಿಧೆಡೆಯಿಂದ ಭಜನೆ ಸಂಕೀರ್ತನೆ ಮಾಡಿಕೊಂಡು ಭಗವಂತನ ಮುಂದೆ ನಾವೆಲ್ಲ ಒಂದು ಎಂದು ನೂರಾರು ಮೈಲು ಪಾದಯಾತ್ರೆ ಮಾಡಿಕೊಂಡು ಪಂಢರಾಪುರ ತಲುಪಿ ಚಂದ್ರಭಾಗಾ ಪುಣ್ಯ ನದಿಯಲ್ಲಿ ಸ್ನಾನಾದಿಗಳನ್ನು ಮಾಡಿ, ಆಷಾಢ ಶುದ್ಧ ಏಕಾದಶಿಯಂದು ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಭಕ್ತಿ ಭಾವದಿಂದ ವಿಠ್ಥಲನ ದರ್ಶನ ಪಡೆಯುತ್ತಾರೆ.
ಪ್ರತಿ ತಿಂಗಳ ಶುಕ್ಲ ಹಾಗೂ ಕೃಷ್ಣ ಪಕ್ಷಗಳ ಹನ್ನೊಂದನೇ ದಿನವನ್ನು ಏಕಾದಶಿ ಎಂದು ಕರೆಯುವುದು ಎಲ್ಲರಿಗೂ ತಿಳಿದ ವಿಷಯವಷ್ಟೇ. ಏಕಾದಶಿಯಂದು ಯಾವುದೇ ರೀತಿಯ ಆಹಾರವನ್ನು ಸೇವಿಸದೇ ನಿಟ್ಟುಪವಾಸದಿಂದ ಭಗವಂತನ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ನಂಬಿಕೆಯಾಗಿದೆ. ಅದರಲ್ಲಿಯೂ ಆಷಾಢ ಶುದ್ಧ ಏಕಾದಶಿಗೆ ಬಹಳ ವಿಶೇಷ ಮಹತ್ವವಿದ್ದು ಇದನ್ನು ಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಭಗವಂತನು ಈ ದಿನ ಯೋಗ ನಿದ್ರೆಗೆ ಜಾರಿ, ಮುಂದೆ ಭಾದ್ರಪದ ಶುದ್ಧ ಪರಿವರ್ತನಿ ಏಕಾದಶಿಯಂದು ತನ್ನ ಮಲಗುವ ಮಗ್ಗಲು ಬದಲಿಸಿ, ಕಾರ್ತಿಕ ಶುದ್ಧ ಏಕಾದಶಿಯ ಮಾರನೇ ದಿನ ಉತ್ಥಾನ ದ್ವಾದಶಿಯಂದು ಭಗವಂತ ಯೋಗ ನಿದ್ರೆಯಿಂದ ಏಳುತ್ತಾನೆ ಎಂಬ ನಂಬಿಕೆ ಇದೆ.
ಉಮಾಸುತ